ಮೇಕೆದಾಟು ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಯನ್ನ ತರಾಟೆಗೆ ತೆಗೆದುಕೊಂಡಿದೆ. ಕೋವಿಡ್ ಹೆಚ್ಚುತ್ತಿರುವ ವೇಳೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದೀರಾ, ಪಾದಯಾತ್ರೆಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ ಎಂದು ಕೆಪಿಸಿಸಿ ನಾಯಕರನ್ನ ಪ್ರಶ್ನಿಸಿರುವ ವಿಭಾಗೀಯ ಪೀಠ, ಈ ಬಗ್ಗೆ ಉತ್ತರಿಸಲು ನಾಳೆವರೆಗೆ ಕಾಲಾವಕಾಶ ನೀಡಿದೆ.
ಪಿಐಎಲ್ ವಿಚಾರಣೆ ವೇಳೆ ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಚರ್ಚೆ ನಡೆಸಿದ್ದು. ಈಗಾಗಲೇ ಪಾದಯಾತ್ರೆ ನಡೆಸುವವರ ಮೇಲೆ ಎಫ್ಐಆರ್ ದಾಖಲಾಗಿದೆ. ಇಲ್ಲಿವರೆಗು ಮೂರು ಎಫ್ಐಆರ್ ಗಳನ್ನ ದಾಖಲಿಸಿರುವುದಾಗಿ ಅಡ್ವೋಕೇಟ್ ಜನರಲ್ ಮಾಹಿತಿ ನೀಡಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಭಾಗೀಯ ಪೀಠ, ಪಾದಯಾತ್ರೆ ತಡೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಪಾದಯಾತ್ರೆ ತಡೆಯಲು, ಸರ್ಕಾರ ಅಸಮರ್ಥವಾಗಿದೆಯೇ. ಪಾದಾಯಾತ್ರೆಗೆ ಅನುಮತಿ ಕೊಟ್ಟಿಲ್ಲದ್ದಿದ್ದರೆ ಯಾರಿಗಾಗಿ ಕಾಯುತ್ತಿದ್ದೀರಿ..?. ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ, ಅನುಮತಿ ಇಲ್ಲದಿದ್ದರು ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಆದರೂ ರಾಜ್ಯ ಸರ್ಕಾರ ಹೇಗೆ ಸುಮ್ಮನೆ ಕುಳಿತಿದೆ..? ನ್ಯಾಯಾಲಯದ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ ಎಂದು ರಾಜ್ಯ ಸರ್ಕಾರವನ್ನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ, ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ. ಎಸ್ಒಪಿ ಜಾರಿಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ನಿಯಂತ್ರಣವಿಲ್ಲದೆ ಹೆಚ್ಚಾಗುತ್ತಿರುವ ವೇಳೆಯಲ್ಲಿ ಪಾದಯಾತ್ರೆಗೆ ಏಕೆ ಅವಕಾಶ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿರುವ ಹೈಕೋರ್ಟ್ ಈ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ತಾಕೀತು ಮಾಡಿದೆ. ರಾಜ್ಯ ಸರ್ಕಾರಕ್ಕೆ ಒಂದು ದಿನದ ಕಾಲಾವಕಾಶ ನೀಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನ ಜನವರಿ 14 ಕ್ಕೆ ಮುಂದೂಡಿದೆ.