ಬುಲ್ಲಿ ಬಾಯಿ ಆ್ಯಪ್ನ ಮಾಸ್ಟರ್ ಮೈಂಡ್ ಎಂದು ಹೇಳಲಾದ 18 ವರ್ಷದ ಶ್ವೇತಾ ಸಿಂಗ್ ಎಂಬಾಕೆ ತನ್ನ ಮೃತ ತಂದೆಯ ಗುರುತನ್ನು ಬಳಸಿಕೊಂಡು ಸಿಮ್ ಕಾರ್ಡ್ ಪಡೆದು ನಕಲಿ ಟ್ವಿಟರ್ ಖಾತೆಯನ್ನು ರಚಿಸಿ ಅದನ್ನು ಬಳಕೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರದಂದು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರ ಪ್ರದೇಶದ ಆದರ್ಶ ಕಾಲೋನಿಯಲ್ಲಿ ಶ್ವೇತಾ ಸಿಂಗ್ ಅವರನ್ನು ಬಂಧಿಸಲಾಗಿದೆ.
ಆರಂಭದಲ್ಲಿ ನಕಲಿ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿರುವುದು ಪುರುಷ ಎಂದುಕೊಂಡ ಮುಂಬೈ ಪೊಲೀಸರು ಗೊಂದಲಕ್ಕೀಡಾದರು. ಮುಂಬೈ ಪೊಲೀಸರು ಸೈಬರ್ ಸೆಲ್ ಮೂಲಕ ಕರೆಯ ವಿವರಗಳ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಈ ವೇಳೆಯಲ್ಲಿ ಮುಂಬೈ ಪೊಲೀಸರಿಗೆ ಶಾಕ್ ಕಾದಿತ್ತು.
ಪೊಲೀಸರು ಆದರ್ಶ ನಗರ ಕಾಲೋನಿ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ಆರೋಪಿ ಓರ್ವ ಯುವತಿ ಎಂದು ಪೊಲೀಸರಿಗೆ ತಿಳಿದುಬಂದಿದೆ. ಬಳಿಕ ಉತ್ತರಾಖಂಡ್ ಪೊಲೀಸರ ಸಹಾಯ ಪಡೆದ ಪೊಲೀಸರು ಆಕೆಯನ್ನು ಬಂಧಿಸಿದರು. ಬಂಧಿತ ಶ್ವೇತಾ JattKhalsa07 ಎಂಬ ನಕಲಿ ಟ್ವಿಟರ್ ಖಾತೆಯನ್ನು ಬಳಕೆ ಮಾಡುತ್ತಿದ್ದಳು.
ಈ ನಕಲಿ ಖಾತೆಯನ್ನು ದ್ವೇಷಪೂರಿತ ಹಾಗೂ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಾಗೂ ಕಮೆಂಟ್ಗಳನ್ನು ಹಾಕಲು ಬಳಕೆ ಮಾಡಲಾಗುತ್ತಿತ್ತು. ಈಕೆಯ ಸಿದ್ಧಾಂತವನ್ನೇ ಹೊಂದಿದ್ದವರೂ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.