ನವದೆಹಲಿ: ಯುಪಿ ಉದ್ಯಮಿ ಪಿಯೂಷ್ ಜೈನ್ ಹಳೆಯ ಸ್ಕೂಟರ್ನಲ್ಲಿ ತಮ್ಮ ಹುಟ್ಟೂರಾದ ಕನೌಜ್ನಲ್ಲಿ ಪ್ರಯಾಣಿಸಿದ್ದಾರೆ.
ಕೋಟ್ಯಧಿಪತಿಯಾದ್ರು ಸಿಂಪಲ್ ಮನುಷ್ಯ ಅಂತಾ ಜನರು ಹೇಳುತ್ತಾರೆ. ಆದರೆ, ಇತ್ತೀಚೆಗಷ್ಟೇ ಕೋಟಿ-ಕೋಟಿ ಅಕ್ರಮ ಹಣ, ಚಿನ್ನವನ್ನು ಅವರಿಂದ ಜಪ್ತಿ ಮಾಡಿದ್ದಾರೆ.
ಪಿಯೂಷ್ ಜೈನ್ ಮನೆಯ ಹೊರಗೆ ಕ್ವಾಲಿಸ್ ಮತ್ತು ಮಾರುತಿ ಕಾರು ಮಾತ್ರ ಕಂಡುಬರುತ್ತದೆ. ಆದರೆ ಕಾನ್ಪುರ ಮೂಲದ ಸುಗಂಧ ದ್ರವ್ಯ ತಯಾರಕರಾಗಿರುವ ಇವರು, ತೆರಿಗೆ ವಂಚಿಸಿ ಸುಮಾರು 200 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿರುವ ಬಗ್ಗೆ ಕಳೆದ ವಾರವಷ್ಟೇ ಪತ್ತೆಯಾಗಿತ್ತು.
ಕನೌಜ್ನಲ್ಲಿರುವ ಪಿಯೂಷ್ ಮನೆ ಮತ್ತು ಕಾರ್ಖಾನೆಯಲ್ಲಿ 194 ಕೋಟಿ ರೂ. ನಗದು ಮತ್ತು 23 ಕೆ.ಜಿ. ಚಿನ್ನವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮನೆಗೆ ದಾಳಿ ನಡೆಸಿದ ಅಧಿಕಾರಿಗಳು, ನೋಟು ಎಣಿಸುವ ಯಂತ್ರಗಳನ್ನು ಬಳಸಿ ನೋಟುಗಳ ರಾಶಿಯನ್ನು ಎಣಿಸಲು ತೋರಿಸುತ್ತಿರುವ ಚಿತ್ರಗಳು ಕಳೆದ ವಾರ ವೈರಲ್ ಆಗಿದ್ದವು.
ಪಿಯೂಷ್ ಜೈನ್ ಅವರು ರಸಾಯನ ಶಾಸ್ತ್ರಜ್ಞರಾದ ಅವರ ತಂದೆಯಿಂದ ಸುಗಂಧ ದ್ರವ್ಯಗಳು ಮತ್ತು ಖಾದ್ಯ ಸಾರಗಳನ್ನು ತಯಾರಿಸುವ ಕಲೆಯನ್ನು ಕಲಿತಿದ್ದು, ಕಾನ್ಪುರದಲ್ಲಿ ಸುಗಂಧ ದ್ರವ್ಯ ವ್ಯಾಪಾರವನ್ನು ಪ್ರಾರಂಭಿಸಿದ್ದರು. ಕಳೆದ 15 ವರ್ಷಗಳಲ್ಲಿ ಇದನ್ನು ದೇಶದ ಹಲವಾರು ಭಾಗಗಳಿಗೆ ವಿಸ್ತರಿಸಿದ್ದಾರೆ. ಇದೀಗ ಅವರು ಮುಂಬೈ ಮತ್ತು ಗುಜರಾತ್ನಲ್ಲಿ ಭರ್ಜರಿ ವ್ಯಾಪಾರವನ್ನು ಹೊಂದಿದ್ದಾರೆ.
ಊರಿಗೆ ಬಂದಾಗಲೆಲ್ಲ ಜೈನ್ ತನ್ನ ಹಳೆ ಸ್ಕೂಟರ್ ನಲ್ಲಿ ಕಾಣಿಸಿಕೊಂಡು, ಸರಳ ಜೀವನ ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ನಗದು ಜತೆಗೆ ಜೈನ್ ಅವರ ನಿವಾಸ ಮತ್ತು ಕಾರ್ಖಾನೆಯಿಂದ ಕೋಟಿಗಟ್ಟಲೆ ಮೌಲ್ಯದ ಚಿನ್ನ, ಬೆಳ್ಳಿ, ಲೆಕ್ಕಕ್ಕೆ ಸಿಗದ ಶ್ರೀಗಂಧದ ಎಣ್ಣೆ, ಸುಗಂಧ ದ್ರವ್ಯಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.