ಕೊಲೆ ಆರೋಪವಿರುವ ತನ್ನ ಗಂಡನ ಸಹಾಯಕ್ಕೆ ನಿಂತ ಪತ್ನಿ, ಉತ್ತರಾಖಂಡದ ಎಸ್‌ಟಿಎಫ್ ಪೊಲೀಸರು ಮತ್ತು ರಾಜೇಂದ್ರನಗರ ಪೊಲೀಸ್ ತಂಡಕ್ಕೆ ಮೆಣಸಿನ ಪುಡಿ ಎರಚಿದ ಘಟನೆ ನಡೆದಿದೆ. ತೆಲಂಗಾಣದ ಅತ್ತಾಪುರದಲ್ಲಿ ಆರೋಪಿ ವಾಸಿಮ್ ಗೆ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಖಾರದ ಪುಡಿ ಎರಚಿ ಪತ್ನಿ ಸಹಾಯ ಮಾಡಿದ್ದಾಳೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 353 ರ ಅಡಿಯಲ್ಲಿ ಶಮೀಮ್ ಪರ್ವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ನಂತರ, ಬುಧವಾರದಂದು ರಿಲೀಸ್ ಮಾಡಲಾಗಿದೆ.
2019 ರ ಕೊಲೆ ಪ್ರಕರಣದಲ್ಲಿ ಮಹಿಳೆಯ ಪತಿ ಉತ್ತರಾಖಂಡ ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದಾನೆ. ಅಲ್ಲಿಂದ ಪರಾರಿಯಾಗಿದ್ದ ದಂಪತಿ, ಹೈದರಾಬಾದ್ ನ ಅತ್ತಾಪುರದ ಸುಲೇಮಾನ್ ನಗರದಲ್ಲಿ ನೆಲೆಸಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು.
ಇದನ್ನು ಖಚಿತಪಡಿಸಿಕೊಂಡ ಉತ್ತರಾಖಂಡ ವಿಶೇಷ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸರ ತಂಡ ವಾಸಿಂ ಮನೆಗೆ ತೆರಳಿದೆ. ಎಸ್ಟಿಎಫ್ ತಂಡದೊಂದಿಗೆ ರಾಜೇಂದ್ರನಗರದ ಪೊಲೀಸ್ ಠಾಣೆಯ ಮೂವರು ಕಾನ್‌ಸ್ಟೆಬಲ್‌ಗಳು ಇದ್ದರು.
ಮಹಿಳೆ ಪೊಲೀಸರನ್ನು ಕಂಡ ಕೂಡಲೇ ಎಸ್‌ಟಿಎಫ್ ಕಾನ್ ಸ್ಟೇಬಲ್ ಚಮನ್‌ಕುಮಾರ್ ಹಾಗೂ ಸ್ಥಳೀಯ ಕಾನ್ ಸ್ಟೇಬಲ್ ಮೇಲೆ ಮೆಣಸಿನ ಪುಡಿ ಎರಚಿದ್ದಾಳೆ. ಆನಂತರ ಹೈಡ್ರಾಮಾ ಸೃಷ್ಟಿಸಿದ ಶಮೀನ್ ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೂಗಾಡಿ, ಸ್ಥಳದಲ್ಲಿ ಗುಂಪು ಸೇರಿವಂತೆ ಮಾಡಿದ್ದಾಳೆ. ಇಷ್ಟೆಲ್ಲಾ ಗದ್ದಲಗಳ ನಡುವೆ ವಾಂಟೆಡ್ ಆರೋಪಿ ವಾಸಿಂ ಮನೆಯಿಂದ ಪರಾರಿಯಾಗಿದ್ದಾನೆ.