ರೇವಾ: ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ನಾಲ್ವರು, ತಮ್ಮ ಸ್ನೇಹಿತನನ್ನು ಕ್ರೂರವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ವರ್ಷದ ಜುಲೈನಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ವಿಡಿಯೋದಲ್ಲಿ, ಆರೋಪಿಯೊಬ್ಬ ಸ್ಥಳೀಯ ಆಡುಭಾಷೆಯಲ್ಲಿ ಇದು ನಾನು, ಇವರು ನನ್ನ ಸ್ನೇಹಿತರು ಮತ್ತು ನಾವು ಪಾರ್ಟಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾನೆ. ಬಳಿಕ ಎಲ್ಲಾ ನಾಲ್ವರು ಆರೋಪಿಗಳು ಸೇರಿಕೊಂಡು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾಕಿಸ್ತಾನದ ಪ್ರಭಾವಿ ದನನೀರ್ ಮೊಬೀನ್ ಅವರ ಪಾವ್ರಿ ಹೋ ರಹೀ ಹೈ ಮೆಮೆಯೊಂದಿಗೆ ಥಳಿಸಿದ ದೃಶ್ಯದ ವಿಡಿಯೋ ಮಾಡಿದ್ದಾರೆ.
ಜುಲೈನಲ್ಲಿ ಯುವಕನೊಬ್ಬನನ್ನು ಆತನ ಸ್ನೇಹಿತರು ಥಳಿಸಿದ ವಿಡಿಯೋ ಕುರಿತು ಮಂಗಳವಾರ ಮಾಹಿತಿ ಸಿಕ್ಕಿದೆ. ಸಂತ್ರಸ್ತನ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ರೇವಾದ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ತಿಳಿಸಿದ್ದಾರೆ.
ಸಂತ್ರಸ್ತ ಅಮಿತ್ ಪಾಂಡೆ, ತಮ್ಮ ಗ್ರಾಮವಾದ ಖಾಜುವಾಗೆ ತೆರಳುತ್ತಿದ್ದಾಗ ಆರೋಪಿಗಳಾದ ಪ್ರಿನ್ಸ್ ಪಟೇಲ್, ಸೂರಜ್ ಪ್ರಜಾಪತಿ, ಲಲ್ಲಾ ಪಂಡಿತ್ ಮತ್ತು ಶಾದಾಬ್ ತಡೆದಿದ್ದಾರೆ. ಮಾದಕ ವಸ್ತು ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಆರೋಪಿಸಿ ಕ್ರೂರವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ಥ ಅಮಿತ್ ಆರೋಪಿಸಿದ್ದಾನೆ.
ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಈಗಾಗಲೇ ಜೈಲಿನಲ್ಲಿದ್ದಾರೆ (ಇತರ ಪ್ರಕರಣಗಳಲ್ಲಿ), ಮತ್ತೊಬ್ಬನನ್ನು ಬಂಧಿಸಲಾಗಿದೆ. ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.