ದೆಹಲಿಯ ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿಯನ್ನು ನಿಂದಿಸಿ ಹಲ್ಲೆ ಮಾಡಿದ ಕಾರಣಕ್ಕಾಗಿ ದೆಹಲಿ ಪೊಲೀಸರು ಕಾಂಗ್ರೆಸ್ನ ಮಾಜಿ ಶಾಸಕ ಆಸಿಫ್ ಮೊಹಮ್ಮದ್ ಖಾನ್ರನ್ನು ಬಂಧಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಶಾಹೀನ್ ಭಾಗ್ ಪ್ರದೇಶದಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಆಸಿಫ್ ಅವರನ್ನು ಬಂಧಿಸಲಾಗಿದೆ.
ಮಾಜಿ ಶಾಸಕ ಆಸಿಫ್ ಮೊಹಮ್ಮದ್, ತಮ್ಮ ಫೋಟೋ ಇರುವ ಪೋಸ್ಟರ್ ತೆಗೆದು ಹಾಕಿದ್ರು ಎಂಬ ಕಾರಣಕ್ಕೆ ಕೋಪಗೊಂಡು ಕಾರ್ಪೋರೇಷನ್ ಸಿಬ್ಬಂದಿಯನ್ನು ನಿಂದಿಸಿದ್ದು ಮಾತ್ರವಲ್ಲದೇ ಥಳಿಸಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಿವಿ ಹಿಡಿದುಕೊಂಡು ಉಠ್ ಬೈಸ್ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಘಟನೆ ಸಂಬಂಧ ಲಜಪತ್ ನಗರ ಝೋನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸಿಫ್ ಮೊಹಮ್ಮದ್ ವಿರುದ್ಧ ಸೆಕ್ಷನ್ 186, 353, 332 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮಾಜಿ ಶಾಸಕನನ್ನು ಬಂಧಿಸಿದ್ದಾರೆ.