ಭಾರತ ಡಿಜಿಟಲ್ ಆಗ್ತಿದೆ. ಭಾರತದಲ್ಲಿ ಈಗ ಸರ್ಕಾರಿ ಹಾಗೂ ಖಾಸಗಿ ಸೇವೆಗಳು ಆನ್ಲೈನ್ ನಲ್ಲಿ ಸಿಗ್ತಿವೆ. ಸರ್ಕಾರದ ಅನೇಕ ಸೇವೆಗಳನ್ನು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಪಡೆಯಬಹುದು. ಇದ್ರಲ್ಲಿ ಚಾಲನಾ ಪರವಾನಗಿ ಕೂಡ ಒಂದು. ಚಾಲನಾ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ನೀವು ಸುಲಭವಾಗಿ ಮನೆಯಲ್ಲೇ ಮಾಡಬಹುದು.
ಮೊದಲು ಅಧಿಕೃತ ಸಾರಿಗೆ ಸೇವೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮುಖ್ಯ ಪುಟದಲ್ಲಿ ಆನ್ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ಡ್ರಾಪ್ ಡೌನ್ ಮೆನುವಿನಲ್ಲಿ ನಿಮಗೆ ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಪುಟ ತೆರೆದುಕೊಳ್ಳುತ್ತದೆ. ರಾಜ್ಯದ ಆಯ್ಕೆ ಮಾಡಬೇಕಾಗುತ್ತದೆ. ಅಲ್ಲಿ ನೀವು ಚಾಲನಾ ಪರವಾನಗಿ ನವೀಕರಣದ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಅರ್ಜಿ ಸಲ್ಲಿಸಲು ಸೂಚನೆ ಕಾಣಿಸುತ್ತದೆ.
ಅದನ್ನು ಎಚ್ಚರಿಕೆಯಿಂದ ಓದಿದ ನಂತರ ಮುಂದುವರಿಸಿ ಕ್ಲಿಕ್ ಮಾಡಬೇಕು. ಚಾಲನಾ ಪರವಾನಗಿ ಸಂಖ್ಯೆ ಮತ್ತು ಪರವಾನಗಿ ಹೊಂದಿರುವವರ ಜನ್ಮ ದಿನಾಂಕವನ್ನು ನಮೂದಿಸಿ ಮತ್ತು ಡಿಎಲ್ ವಿವರಗಳನ್ನು ಪಡೆಯಿರಿ ಕ್ಲಿಕ್ ಮಾಡಬೇಕು. ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ಒಮ್ಮೆ ಸ್ವೀಕರಿಸಿದ ನಂತರ, ಅರ್ಜಿ ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತ್ರ ಸೂಚನೆಯಂತೆ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಡಿಎಲ್ ನವೀಕರಣಕ್ಕೆ ಬೇರೆ ಬೇರೆ ರಾಜ್ಯದಲ್ಲಿ ಶುಲ್ಕ ಬೇರೆ ಬೇರೆಯಿದೆ.
ಪರವಾನಗಿಯ ಅವಧಿ ಮುಗಿಯುವ ಒಂದು ತಿಂಗಳ ಮೊದಲು ನೀವು ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪರವಾನಗಿಯ ಅವಧಿ ಮುಗಿಯುವ ದಿನಾಂಕದಿಂದ 30 ದಿನಗಳಲ್ಲಿ ಡಿಎಲ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದರೆ, ಪರವಾನಗಿ ಮುಕ್ತಾಯ ದಿನಾಂಕದಿಂದ ನವೀಕರಿಸಲಾಗುತ್ತದೆ. ಪರವಾನಗಿಯ ಮುಕ್ತಾಯ ದಿನಾಂಕದಿಂದ 30 ದಿನಗಳ ನಂತರ ಡಿಎಲ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದರೆ, ಪರವಾನಗಿಯನ್ನು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ನವೀಕರಿಸಲಾಗುತ್ತದೆ. ಡಿಎಲ್ ಮುಕ್ತಾಯ ದಿನಾಂಕದಿಂದ ಐದು ವರ್ಷಗಳ ನಂತರ ಡಿಎಲ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹೊಸ ಡಿಎಲ್ ಗೆ ನೀವು ಅರ್ಜಿ ಸಲ್ಲಿಸಬೇಕು.