ಮಲಪ್ಪುರಂ: 10ನೇ ತರಗತಿ ವಿದ್ಯಾರ್ಥಿಯೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಕೊಂಡೊಟ್ಟಿಯ 15 ವರ್ಷದ ವಿದ್ಯಾರ್ಥಿ ನಿನ್ನೆ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಮತ್ತು ಯುವತಿಗೆ ಹಿಂದೆ ತೊಂದರೆ ನೀಡದ ಬಾಲಕ ನಿನ್ನೆ ಏಕಾಏಕಿ ಈ ರೀತಿ ವರ್ತಿಸಿದ್ದು, ಆತನಿಂದ ತಪ್ಪಿಸಿಕೊಂಡು ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಮಣ್ಣಾಗಿದ್ದ ಬಟ್ಟೆ ಮತ್ತು ತರಚಿದ ಗಾಯ ಕಂಡು ಮನೆಯವರು ಪ್ರಶ್ನಿಸಿದಾಗ ನಾಯಿ ಅಟ್ಟಿಸಿಕೊಂಡು ಬಂದಿದ್ದರಿಂದ ಬಿದ್ದು ಪೆಟ್ಟಾಗಿದೆ ಎಂದು ಬಾಲಕ ಸುಳ್ಳು ಹೇಳಿದ್ದಾನೆ.
ಯುವತಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆತನ ಮನೆಗೆ ಬಂದು ವಿಚಾರಿಸಿದಾಗ ಇಂತಹ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್. ಸುಜಿತ್ ದಾಸ್ ಮಾಧ್ಯಮ ಪ್ರತಿನಿಧಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಕೊಂಡೊಟ್ಟಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ತನ್ನ ಅದೃಷ್ಟದ ಬಲದಿಂದ ಬದುಕಿದ್ದಾಳೆ ಎಂದು ತಿಳಿಸಿದ್ದಾರೆ.
ಹುಡುಗ ಅವಳ ಕುತ್ತಿಗೆಯನ್ನು ಹಿಸುಕಿ ಕಲ್ಲಿನಿಂದ ಹೊಡೆದಿದ್ದಾನೆ. 10ನೇ ತರಗತಿ ವಿದ್ಯಾರ್ಥಿಯಾಗಿದ್ದರೂ ಸದೃಢವಾಗಿದ್ದಾನೆ. ಆತ ಜೂಡೋ ಚಾಂಪಿಯನ್ ಕೂಡ ಆಗಿದ್ದಾನೆ. ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು.
ಕಾಲೇಜ್ ವಿದ್ಯಾರ್ಥಿನಿಯನ್ನು ಮನೆಯಿಂದ ಹಿಂಬಾಲಿಸಿಕೊಂಡು ಬಂದಿದ್ದ ಬಾಲಕ ವೇಲ್ ನಿಂದ ಯುವತಿ ಕಟ್ಟಿಹಾಕಿ ಕುತ್ತಿಗೆ ಬಿಗಿದು ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಕೃತ್ಯದ ವೇಳೆ ಆತ ಧರಿಸಿದ್ದ ಉಡುಪನ್ನು ಆತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಆತನಿಂದ ತಪ್ಪಿಸಿಕೊಂಡು ಬಂದ ಯುವತಿ ಸಹಾಯಕ್ಕಾಗಿ ನೆರೆಯವರನ್ನು ಸಂಪರ್ಕಿಸಿದ್ದಾಳೆ ಎಂದು ತಿಳಿಸಿದ್ದಾರೆ.