ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಭದ್ರಾವತಿಯ ಗೋಣಿಬೀಡಿನಲ್ಲಿ ಅಪ್ಪಾಜಿಗೌಡರ ಪುತ್ಥಳಿ ಅನಾವರಣದ ಬಳಿಕ ಅವರು ಮಾತನಾಡಿದರು.
ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಹೆಚ್.ಡಿ.ಕೆ., ಭದ್ರಾವತಿ ಕ್ಷೇತ್ರದ ಜನರ ಹಾಗೂ ಅಪ್ಪಾಜಿಗೌಡರ ಬೆಂಬಲಿಗರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಈಗಾಗಲೇ ಕ್ಷೇತ್ರದ ಜನರೇ ತಮ್ಮ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದಾರೆ. ಹಾಗೆಯೇ ಸಹೋದರಿ ಶಾರದಾ ಅಪ್ಪಾಜಿಗೌಡರನ್ನು ಮುಂದಿನ ಅಭ್ಯರ್ಥಿ ಮಾಡುತ್ತೇವೆ ಎಂದರು.
ಇದೇ ತಿಂಗಳ 27 ರಂದು ಬೆಂಗಳೂರಿನಲ್ಲಿ ಕಾರ್ಯಾಗಾರ ಮಾಡುತ್ತಿದ್ದು, ನಿರ್ಧಾರ ಮಾಡ್ತೇವೆ. 140 ಅಭ್ಯರ್ಥಿಗಳ ಮೊದಲ ಹಂತದ ಕಾರ್ಯಾಗಾರವನ್ನು ಮಾಡುತ್ತಿದ್ದೇವೆ. ಅಲ್ಲಿ ಎಲ್ಲಾ ವಿಷಯವನ್ನು ಚರ್ಚೆ ಮಾಡುತ್ತೇವೆ ಎಂದರು.
ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿಧೇಯಕ ಜಾರಿಗೆ ತರಲು ಹೊರಟಿದೆ. ಬಿಜೆಪಿ ಒಂದು ಕಡೆ ಹಿಂದುತ್ವದ ಹೆಸರು ಹೇಳುತ್ತಾ ಮತ್ತೊಂದು ಕಡೆ ಅವರದ್ದೇ ಸರ್ಕಾರದಲ್ಲಿ ದೇವಸ್ಥಾನವನ್ನು ಒಡೆಯುತ್ತಾರೆ. ವಿಧೇಯಕ ತರಲು ಹೊರಟಿರುವ ಮೊದಲೇ ಎಚ್ಚೇತ್ತುಕೊಳ್ಳಬೇಕಿತ್ತು. ವಿಧೇಯಕದ ಮೂಲಕ ಮತ್ತೊಂದು ಡ್ರಾಮಾ ಪ್ರಾರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ.