ಕೋವಿಡ್ ಮೂರನೇ ಅಲೆ ಎದುರಿಸಲು ದೇಶ ಸಜ್ಜಾಗುತ್ತಿರುವ ನಡುವೆ ಮೊದಲು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ತಜ್ಞರು ಹೇಳುತ್ತಲೇ ಬರುತ್ತಿದ್ದಾರೆ.
ಇದೀಗ ಕೋವಿಡ್ ಲಸಿಕೆಗಳು ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ವಿಶ್ಲೇಷಣೆ ನಡೆಸುತ್ತಿರುವ ಕೇಂದ್ರ ಸರ್ಕಾರವು, ಭಾರತದಲ್ಲಿ ಕೋವಿಡ್-19 ಸಂಬಂಧಿ ಸಾವುಗಳನ್ನು ತಡೆಗಟ್ಟಲು ಒಂದು ಚುಚ್ಚುಮದ್ದು ಶೇ.96.6ರಷ್ಟು ಪರಿಣಾಮಕಾರಿ ಆದರೆ ಎರಡು ಚುಚ್ಚುಮದ್ದುಗಳು ಈ ಪರಿಣಾಮವನ್ನು ಶೇ.97.5ಕ್ಕೆ ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಈ ವರ್ಷದ ಏಪ್ರಿಲ್ ಹಾಗೂ ಆಗಸ್ಟ್ ನಡುವಿನ ಅವಧಿಯಲ್ಲಿ ಕಂಡುಕೊಂಡ ದತ್ತಾಂಶಗಳ ಅಧ್ಯಯನ ನಡೆಸಿದ ಆರೋಗ್ಯ ಸಚಿವಾಲಯ ಈ ವಿಶ್ಲೇಷಣೆಯನ್ನು ಸಾರ್ವಜನಿಕಗೊಳಿಸಿದೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಸಂಭವಿಸಿದ ಬಹುತೇಕ ಸಾವುಗಳು ಚುಚ್ಚುಮದ್ದುಗಳನ್ನು ತೆಗೆದುಕೊಳ್ಳದೇ ಇದ್ದ ಜನರಲ್ಲೇ ಹೆಚ್ಚಾಗಿ ಕಂಡುಬಂದಿವೆ ಎಂದು ಸರ್ಕಾರ ತಿಳಿಸಿದೆ.
ಅತ್ಯಾಚಾರ ಆರೋಪಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ; ಸಿಐಡಿಗೆ ವರ್ಗಾವಣೆ
“ವೈರಸ್ ವಿರುದ್ಧ ಲಸಿಕೆ ಬಹಳ ಮುಖ್ಯವಾದ ಕವಚ. ಲಸಿಕೆಗಳು ಎಲ್ಲೆಡೆ ಲಭ್ಯವಿವೆ. ಲಸಿಕೆ ಪಡೆಯಿರಿ ಎಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ. ಕೋವಿಡ್ ನಿಂದಾಗಿ ಸಾವುಗಳು ಸಂಭವಿಸುವುದಿಲ್ಲ ಎಂದು ಇದು ಖಾತ್ರಿ ಪಡಿಸುತ್ತದೆ” ಎಂದು ಕೇಂದ್ರ ಸರ್ಕಾರದ ಕೋವಿಡ್ ಟಾಸ್ಕ್ ಪಡೆಯ ಮುಖ್ಯಸ್ಥ ವಿಕೆ ಪೌಲ್ ತಿಳಿಸಿದ್ದಾರೆ.
“ದೇಶದ ಜನತೆಯ ಶೇ.58ರಷ್ಟು ಮಂದಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಶೇ.18 ಮಂದಿ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ” ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಇದೇ ವೇಳೆ, ದೇಶದಲ್ಲಿ ಕೋವಿಡ್ ಲಸಿಕೆ ಪಡೆದ ಮಂದಿಯ ಸಂಖ್ಯೆ 72 ಕೋಟಿ ದಾಟಿದೆ.
ಕೋವಿಡ್ ಎರಡನೇ ಅಲೆಯಿಂದ ಇನ್ನೂ ಹೊರಬರಲು ಕಷ್ಟಪಡುತ್ತಿರುವ ಭಾರತ 35 ಜಿಲ್ಲೆಗಳಲ್ಲಿ ಪ್ರತಿವಾರ ಪಾಸಿಟಿವ್ ಕಂಡುಬರುವ ಮಂದಿಯ ಸಂಖ್ಯೆ ಶೇ.10ರಷ್ಟು ಇದ್ದು, 30 ಜಿಲ್ಲೆಗಳಲ್ಲಿ ಇದೇ ದರವು ಶೇ.5-10 ನಡುವೆ ಇದೆ.