ಬಿಹಾರದ ಉದ್ಯಮಿ ಹಾಗೂ ಆತನ ಚಾಲಕನ ಕೊಲೆ ಪ್ರಕರಣವನ್ನು ಭೇದಿಸಿರುವ ಜಾರ್ಖಂಡ್ ಪೊಲೀಸರು ಓರ್ವ ಪೇದೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಜಾರ್ಖಂಡ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಉದ್ಯಮಿ ಹಾಗೂ ಚಾಲಕನ ಅಸ್ಥಿಪಂಜರ ಗಾರ್ವಾ ಜಿಲ್ಲೆಯ ಪುಂಡಗ ನದಿಯಲ್ಲಿ ಪತ್ತೆಯಾಗಿತ್ತು.
ಮೃತ ಉದ್ಯಮಿಯನ್ನು ಮಿಥಿಲೇಶ್ ಪ್ರಸಾದ್ ಹಾಗೂ ಆತನ ಚಾಲಕನನ್ನು ಶ್ರವಣ್ ಕುಮಾರ್ ಎಂದು ಗುರುತಿಸಲಾಗಿದೆ. ಔರಾಂಗಾಬಾದ್ ನಿವಾಸಿಯಾಗಿದ್ದ ಮಿಥಿಲೇಶ್ ಬಿಹಾರದ ಪ್ರಸಿದ್ಧ ಉದ್ಯಮಿಯಾಗಿದ್ದರು.
ಆಗಸ್ಟ್ 25ರಂದು ಪುತ್ರ ಹಾಗೂ ಸೊಸೆಯನ್ನು ಭೇಟಿಯಾಗಿದ್ದ ಪ್ರಸಾದ್ ತಮ್ಮ ಪತ್ನಿ ಹಾಗೂ ಚಾಲಕನ ಜೊತೆ ಛತ್ತೀಸಗಢದ ಪಾರ್ಥಾಪುರದಿಂದ ವಾಪಸ್ಸಾಗುತ್ತಿದ್ದರು. ಜಾರ್ಖಂಡ್ ಪೊಲೀಸ್ ಪೇದೆ ಸೇರಿದಂತೆ ಐವರು ರಾಷ್ಟ್ರೀಯ ಹೆದ್ದಾರಿ 139ರಲ್ಲಿ ಕಾರನ್ನು ಅಡ್ಡಗಟ್ಟಿದ್ದಾರೆ. ಪ್ರಸಾದ್ ಹಾಗೂ ಅವರ ಚಾಲಕನಿಗೆ ಗನ್ ಹಿಡಿದು ಬೆದರಿಸಿದ್ದರು.
ತನಿಖೆ ವೇಳೆ ಆರೋಪಿಗಳು ಮೃತ ಪ್ರಸಾದ್ ಬಳಿ 30 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಸಾಕಷ್ಟು ಮಾತುಕತೆಯ ಬಳಿಕ ದರೋಡೆಕೋರರು ಉದ್ಯಮಿ ಪ್ರಸಾದ್ ಬಳಿ 10 ಲಕ್ಷ ರೂಪಾಯಿ ಡೀಲ್ ಮಾಡಿಕೊಂಡಿದ್ದರು.
ಬಿಹಾರ ಉದ್ಯಮಿ ಹಾಗೂ ಚಾಲಕನ ನಾಪತ್ತೆ ವಿಚಾರವಾಗಿ ಪ್ರಸಾದ್ ಪತ್ನಿ ಪಲಮು ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಆರೋಪಿಗಳು ಹಣ ವಸೂಲಿ ಮಾಡಿದ ಬಳಿಕ ಉದ್ಯಮಿ ಹಾಗೂ ಚಾಲಕನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.