ಬೆಂಗಳೂರು: ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಬಾಂಬೆ ರವಿ ಕೋವಿಡ್ ನಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕೊರೋನಾದಿಂದ ಬಳಲುತ್ತಿದ್ದ ನಟೋರಿಯಸ್ ರೌಡಿ, ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿಯ ಕೊಲೆ ಯತ್ನಕ್ಕೆ ಸ್ಕೆಚ್ ಹಾಕಿದ್ದ ಆರೋಪ ಈತನ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಟೋರಿಯಸ್ ಡಾನ್ ಬಾಂಬೆ ರವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಅಲ್ಲದೆ ಹೊರರಾಜ್ಯದಲ್ಲಿರುವಂತೆ ಬಿಂಬಿಸಿ ಇಂಟರ್ನೆಟ್ ಕರೆ ಮುಖಾಂತರ ಉದ್ಯಮಿಗಳಿಗೆ ಬೆದರಿಕೆ ಕರೆಯೊಡ್ಡುತ್ತಿದ್ದ ಎಂಬ ಆರೋಪವೂ ಈತನ ಮೇಲಿತ್ತು. ಸೈಕಲ್ ರವಿ ವಿರೋಧಿ ಬಣದಲ್ಲಿ ಗುರುತಿಸಿದ್ದ ಈ ಕುಖ್ಯಾತ ರೌಡಿ ಹಿರಿಯ ಅಧಿಕಾರಿಗಳ ಜೊತೆ ಪಾರ್ಟಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಸಾಕಷ್ಟು ಬೆದರಿಕೆ ಕರೆ, ಕೊಲೆ ಯತ್ನ ಸೇರಿದಂತೆ ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು.