ಕಾಲೇಜಿನಲ್ಲಿ ಭೋಧಕೇತರ ಸಿಬ್ಬಂದಿಯಾಗಿದ್ದ ಯುವಕ ತನ್ನ ಮಾಜಿ ಗೆಳತಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಬಳಿಕ ಆಸ್ಸಾಂನಲ್ಲಿ ಆರೋಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಧೇಮಾಜಿ ಜಿಲ್ಲೆಯ ಮೊರಿಧಾಲ್ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿನಿಯಾಗಿದ್ದ ನಂದಿತಾ ಸೈಕಿಯಾ, ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವೇಳೆ ಇದೇ ಕಾಲೇಜಿನಲ್ಲಿ ಭೋದಕೇತರ ಸಿಬ್ಬಂದಿಯಾಗಿದ್ದ ರಿಂತು ಶರ್ಮಾ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ದಾಳಿಯಲ್ಲಿ ನಂದಿತಾ ಸ್ನೇಹಿತ ಹಾಗೂ ಸ್ನೇಹಿತನ ತಂದೆ ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಂದಿತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಆರೋಪಿಯ ವಿರುದ್ಧ ಕ್ರಮಕ್ಕೆ ಅಸ್ಸಾಂ ಸರ್ಕಾರ ಸೂಚನೆ ನೀಡಿದೆ.
ದಾಳಿಯ ಬಳಿಕ ಚಿತ್ರೀಕರಿಸಲಾದ ವಿಡಿಯೋದಲ್ಲಿ , ಶರ್ಮಾ ಕೈಯಲ್ಲಿ ಮಾರಕಾಸ್ತ್ರವನ್ನು ಹಿಡಿದಿದ್ದ, ಮಾತ್ರವಲ್ಲದೇ ನಂದಿತಾ ಕುಟುಂಬಸ್ಥರ ಬಳಿ ಆಕೆಗಾಗಿ ನಾನು ಎಲ್ಲವನ್ನೂ ಮಾಡಿದೆ, ಆದರೂ ಆಕೆ ನನ್ನ ಜೀವನವನ್ನ ಹಾಳು ಮಾಡಿದಳು ಎಂದು ಹೇಳಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮಾರಕಾಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮೋರಿದಾರ್ ಕಾಲೇಜು ವಿದ್ಯಾರ್ಥಿಗಳು ನೀಡಿರುವ ಮಾಹಿತಿಯ ಪ್ರಕಾರ ಇವರಿಬ್ಬರು ಕೆಲ ಸಮಯದ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ನಂದಿತಾ ಈ ಪ್ರೇಮ ಸಂಬಂಧದಿಂದ ಹೊರಬರಲು ಯತ್ನಿಸಿದ್ದಳು. ಶರ್ಮಾ ಆಕೆಯನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟಿದ್ದ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿ ಸಾವಿನ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬರ್ತಿದೆ.