ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಉದ್ದೇಶದಿಂದ ಕೇರಳ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ತೆರೆಯಬಹುದು. ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಜಾತ್ರೆ-ಉತ್ಸವ, ಸಭೆ, ಸಮಾರಂಭ, ಮೆರವಣಿಗೆ ನಡೆಸಲು ಅವಕಾಶ ಇರುವುದಿಲ್ಲ. ಅದೇ ರೀತಿ ಮದುವೆ ಮನೆಯಲ್ಲಿ 100 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.
ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಮನರಂಜನೆ, ಕ್ರೀಡೆ ಸಮಾವೇಶ ಸೇರಿದಂತೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಚಟುವಟಿಕೆಗಳಿಗೆ ಕಡ್ಡಾಯವಾಗಿ ನಿರ್ಬಂಧವಿದೆ. ನೈಟ್ ಕರ್ಫ್ಯೂ ಸಂದರ್ಭದಲ್ಲಿ ಜನರು ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮತ್ತು ಸಹಾಯಕರು ಆಸ್ಪತ್ರೆಗೆ ಹೋಗಿ ಬರಲು ಅನುಮತಿ ನೀಡಲಾಗಿದೆ. ರಾತ್ರಿಪಾಳಿಯಲ್ಲಿ ಕಾರ್ಯ ನಿರ್ವಹಿಸುವವರು ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ಔಷಧಿ ಅಂಗಡಿಗಳಿಗೆ, ಇ- ಕಾಮರ್ಸ್ ಕಂಪನಿಗಳ ಪ್ರತಿನಿಧಿಗಳಿಂದ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.
ಬಸ್, ರೈಲು, ವಿಮಾನ ಸಂಚಾರ ಇರಲಿದ್ದು, ಟಿಕೆಟ್ ತೋರಿಸಿ ಸಂಚರಿಸಲು ಅವಕಾಶವಿರುತ್ತದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.