ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ 8 ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ತಮ್ಮ ಕಠಿಣ ದಿನಗಳನ್ನ ನೆನೆದಿದ್ದಾರೆ. ಹಾಗೂ ಈ ಕಠಿಣ ದಿನಗಳಲ್ಲಿ ತಮಗೆ ಟೀಂ ಇಂಡಿಯಾ ಕಂಡ ಶ್ರೇಷ್ಟ ಆಟಗಾರನಿಂದ ಸಿಕ್ಕ ಮಾರ್ಗದರ್ಶನದ ಬಗ್ಗೆಯೂ ಮಾಹಿತಿ ನೀಡಿದ್ರು.
ಮುಂಬೈ ಮೂಲದ ಯುವ ಬ್ಯಾಟ್ಸಮನ್ ಟೀಂ ಇಂಡಿಯಾದಲ್ಲಿ ತಮ್ಮ ಭವಿಷ್ಯವನ್ನ ಭದ್ರ ಮಾಡಿಕೊಳ್ಳಬೇಕಾದ ಸಂದರ್ಭದಲ್ಲೇ ಕಠಿಣ ಸವಾಲುಗಳನ್ನ ಎದುರಿಸಿದ್ದರು. ಟೆಸ್ಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮ್ಯಾನ್ ಆಗಿ ಕಣಕ್ಕಿಳಿಯಬೇಕಾದ ಸಂದರ್ಭದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು.
ಇದಾದ ಬಳಿಕ 2019ರಲ್ಲಿ ಟೀಂ ಇಂಡಿಯಾಗೆ ಹಿಂದಿರುಗಬೇಕು ಅನ್ನೋವಾಗಲೇ ಕೆಮ್ಮು ನಿವಾರಣೆಯಾಗಲೆಂದು ತೆಗೆದುಕೊಂಡ ಸಿರಪ್ನಲ್ಲಿ ನಿಷೇಧಿತ ಮದ್ದು ಇದ್ದಿದ್ದರಿಂದ 8 ತಿಂಗಳು ನಿಷೇಧ ಅನುಭವಿಸಬೇಕಾಯ್ತು. ಇದರಿಂದಾಗಿ ಅವರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ದೂರ ಉಳಿಯಬೇಕಾಗಿ ಬಂತು. ಇದಾದ ಬಳಿಕಕ 2020ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿ ಟೀಂ ಇಂಡಿಯಾ ಪರವಾಗಿ ಆಡಿದ್ದರು.
ಆದರೆ ನಿಷೇಧದ ಶಿಕ್ಷೆಗೆ ಒಳಗಾಗಿದ್ದ ವೇಳೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ತಮ್ಮನ್ನ ಯಾವ ರೀತಿ ಸಂತೈಸಿದ್ದರು ಅನ್ನೋದನ್ನ ನೆನೆಸಿಕೊಂಡಿದ್ದಾರೆ. ಇವೆಲ್ಲವೂ ಜೀವನದ ಒಂದು ಭಾಗವಾಗಿದೆ ಎಂದು ಹೇಳಿದ್ದರು. ಇದರಲ್ಲಿ ನನ್ನ ತಪ್ಪು ಏನೂ ಇರಲಿಲ್ಲ. ನಾನು ಇನ್ನಷ್ಟು ಸದೃಢ ವ್ಯಕ್ತಿಯಾಗಿ ಹಿಂತಿರುಗಿದೆ. ಆದರೆ ಈ ಕಷ್ಟದ ಸಂದರ್ಭದಲ್ಲಿ ಅವರು ನನ್ನನ್ನ ಕರೆಸಿಕೊಂಡು ಸಮಾಧಾನ ಮಾಡಿದ್ದೇ ನನಗೆ ತುಂಬಾ ಸಂತಸವಾಗಿತ್ತು ಎಂದು ಹೇಳಿದ್ದಾರೆ.