ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಕಾಲಿಟ್ಟಾಗಿನಿಂದಲೂ ಸಾಕಷ್ಟು ಮೋಸದ ಜಾಲಗಳು ಬೆಳಕಿಗೆ ಬರುತ್ತಲೇ ಇವೆ. ಔಷಧಿಗಳು, ವೈದ್ಯಕೀಯ ಆಮ್ಲಜನಕ, ಪರೀಕ್ಷಾ ವರದಿ ಹೀಗೆ ಸಾಕಷ್ಟು ವಿಚಾರಗಳಲ್ಲಿ ಸೋಂಕಿತರ ಕುಟುಂಬಸ್ಥರನ್ನ ಮೋಸ ಮಾಡಿದವರಿದ್ದಾರೆ. ಇದೀಗ ಈ ಮೋಸದ ಜಾಲದ ಸಾಲಿಗೆ ಕೊರೊನಾ ಲಸಿಕೆಗಳೂ ಸೇರಿಕೊಂಡಿವೆ.
ಆಘಾತಕಾರಿ ಘಟನೆ ಎಂಬಂತೆ ದೇಶದ ವಿವಿಧ ಭಾಗಗಳಲ್ಲಿ ನಕಲಿ ಕೊರೊನಾ ಲಸಿಕೆಗಳು ಸಾರ್ವಜನಿಕರಿಗೆ ಹಂಚಿಕೆಯಾಗಿದೆ. ಈ ಮೋಸದ ಜಾಲದಲ್ಲಿ ಭಾಗಿಯಾದ ವೈದ್ಯರು, ನರ್ಸ್ ಸೇರಿದಂತೆ ಸಾಕಷ್ಟು ಮಂದಿಯನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಈ ಮೋಸದ ಜಾಲದಲ್ಲಿ ಈಗಾಗಲೇ 14 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಕಳೆದ 2 ತಿಂಗಳಲ್ಲಿ ಮುಂಬೈ ಹಾಗೂ ಪಶ್ಚಿಮ ಬಂಗಾಳದ ಸುಮಾರು 12 ಲಸಿಕಾ ಕೇಂದ್ರಗಳಲ್ಲಿ 2500ಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ ಬದಲಾಗಿ ಲವಣದ ದ್ರಾವಣವನ್ನ ಚುಚ್ಚಲಾಗಿದೆ.
14 ಮಂದಿ ಬಂಧಿತರಲ್ಲಿ ಮುಂಬೈನ ಶಿವಂ ಆಸ್ಪತ್ರೆ ಮಾಲೀಕರಾದ ವೈದ್ಯ ಶಿವರಾಜ್ ಪಟಾರಿಯಾ ಹಾಗೂ ಅವರ ಪತ್ನಿ ನೀತಾ ಪಟಾರಿಯಾ ಸೇರಿದಂತೆ ಹಲವರನ್ನ ಬಂಧಿಸಲಾಗಿದೆ.
ಮುಂಬೈನಲ್ಲಿ 12 ಕಡೆಗಳಲ್ಲಿ ಲಸಿಕಾ ಅಭಿಯಾನವನ್ನ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿಶಾಲ್ ಠಾಕೂರ್ ಹೇಳಿದ್ದಾರೆ. ಈ ನಕಲಿ ಲಸಿಕಾ ಅಭಿಯಾನಗಳು ನಡೆದಲ್ಲೆಲ್ಲ ಸಾರ್ವಜನಿಕರಿಗೆ ಲವಣಯುಕ್ತ ದ್ರಾವಣವನ್ನ ಹಾಕಲಾಗಿದೆ ಎಂದು ಹೇಳಿದ್ರು.