2 ವರ್ಷ ಪ್ರಾಯದ ಮಗು ಒಂದು ಜೀವವನ್ನ ಕಾಪಾಡೋಕೆ ಸಾಧ್ಯವಾ ಎಂದು ಕೇಳಿದ್ರೆ ಬಹುತೇಕರ ಉತ್ತರ ಇಲ್ಲ ಎಂದೇ ಬರುತ್ತೆ. ಕಣ್ಣೆದುರು ಯಾರಾದ್ರೂ ಒದ್ದಾಡ್ತಾ ಇರೋದನ್ನ ಕಂಡಲ್ಲಿ ಮಕ್ಕಳು ಅಬ್ಬಬ್ಬಾ ಅಂದ್ರೆ ಅಳಬಹುದು. ಇದಕ್ಕೂ ಹೆಚ್ಚಿನದ್ದನ್ನ ಏನಾದ್ರೂ ಮಾಡೋಕೆ ಅವರ ತಲೆ ಕೂಡ ಓಡೋದಿಲ್ಲ.
ಆದರೆ ಈ ಎಲ್ಲಾ ಮಾತನ್ನ ಸುಳ್ಳು ಎಂದು ಸಾಬೀತುಪಡಿಸಿದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ 2 ವರ್ಷದ ಬಾಲಕಿ ತನ್ನ ತಾಯಿ ರೈಲ್ವೆ ನಿಲ್ದಾಣದಲ್ಲಿ ತಲೆ ತಿರುಗಿ ಬಿದ್ದಿದ್ದನ್ನ ಕಂಡಿದ್ದಾಳೆ. ಜೊತೆಯಲ್ಲಿ ಆರು ತಿಂಗಳ ತಮ್ಮ ಕೂಡ ಇದ್ದ. ತನ್ನ ತಾಯಿಗೆ ಈ ಸ್ಥಿತಿ ಬಂದಿದ್ದನ್ನ ಗಮನಿಸಿದ ಬಾಲಕಿ ಕೂಡಲೇ ಸಹಾಯಕ್ಕಾಗಿ ಎಲ್ಲೆಡೆ ಹುಡುಕಾಡಿದ್ದಾಳೆ.
ರೈಲ್ವೆಯ ವಿವಿಧ ಫ್ಲಾಟ್ಫಾರಂಗೆ ತೆರಳಿದ ಬಾಲಕಿ ಆರ್ಪಿಎಫ್ ಸಿಬ್ಬಂದಿ ಬಳಿ ಹೋಗಿ ತಾನು ಕಷ್ಟದಲ್ಲಿ ಇದ್ದೇನೆ ಅನ್ನೋದನ್ನ ವಿವರಿಸಿದ್ದಾಳೆ. ಈಕೆಯ ಕೈ ಸನ್ನೆಯನ್ನ ಕಂಡು ಏನೋ ಅಪಾಯ ಆಗಿದೆ ಅನ್ನೋದನ್ನ ಅರಿತ ಆರ್ಪಿಎಫ್ ಜವಾನರು ಬಾಲಕಿಯ ತಾಯಿ ಇದ್ದ ಸ್ಥಳದತ್ತ ಧಾವಿಸಿದ್ದಾರೆ.
ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡುವ ಮೂಲಕ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದು ಈ ಮಕ್ಕಳ ಹೆಸರು ಇನ್ನೂ ತಿಳಿದುಬಂದಿಲ್ಲ. ಇನ್ನು ಈ ವಿಚಾರವಾಗಿ ಮಾತನಾಡಿದ ಎಮೆರ್ಜೆನ್ಸಿ ಹೆಲ್ತ್ಕೇರ್ ಅಧಿಕಾರಿ ಡಾ ಶೋಭಿತ್, 30 ವರ್ಷ ಆಸುಪಾಸಿನ ಮಹಿಳೆ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಾರೆ. ಹೆಚ್ಚಿನ ಚಿಕಿತ್ಸೆಯನ್ನ ಆಕೆಗೆ ನೀಡಲಾಗುತ್ತಿದೆ. ಆದರೆ ಈ ಪುಟ್ಟ ಬಾಲಕಿ ತೋರಿದ ಸಮಯಪ್ರಜ್ಞೆ ಮಾತ್ರ ನಿಜಕ್ಕೂ ಆಶ್ಚರ್ಯದಾಯಕ ಎಂದು ಹೇಳಿದ್ರು.
https://www.facebook.com/indiatimes/videos/377820347009665/