ಬೆಂಗಳೂರು: ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ಸುರೇಶ್ ಕುಮಾರ್ ಅವರು ನನ್ನ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸುರೇಶ್ ಕುಮಾರ್ ನನ್ನೊಂದಿಗೆ ಚರ್ಚೆ ನಡೆಸಿಯೇ ಪರೀಕ್ಷೆಗೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಎಂದು ಸಿಎಂ ತಿಳಿಸಿದ್ದು, ಚರ್ಚಿಸಿದ ನಂತರ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಇಲಾಖೆ ಮತ್ತು ಮುಖ್ಯಮಂತ್ರಿಯವರು ಮೌಖಿಕ ಒಪ್ಪಿಗೆ ನೀಡಿದ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆಗೆ ದಿನಾಂಕವನ್ನು ಘೋಷಿಸಲಾಗಿದೆ ಎಂದು ಎಸ್. ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ವಿಚಾರದಲ್ಲಿ ಆರೋಗ್ಯ ಸಚಿವ ಸುಧಾಕರ್ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ನಡುವೆ ಜಟಾಪಟಿ ನಡೆದಿದೆ. ಪರೀಕ್ಷೆಗೆ ದಿನಾಂಕ ನಿಗದಿ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲವೆಂದು ಸುಧಾಕರ್ ಹೇಳಿದ್ದು, ಪರೀಕ್ಷೆಗಿಂತ ಜೀವ ಮುಖ್ಯವೆಂದು ತಿಳಿಸಿದ್ದರು. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಿರುವುದಾಗಿ ಸುರೇಶಕುಮಾರ್ ಸ್ಪಷ್ಟಪಡಿಸಿದ್ದರು. ಈ ಬೆಳವಣಿಗೆ ಮತ್ತೊಂದು ಹಂತ ತಲುಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆನ್ನಲಾಗಿದೆ.