ಅಹಮದಾಬಾದ್: ಗುಜರಾತ್ ನ ಭಾವಾನಗರ ಜಿಲ್ಲೆಯ ಶಿಹೋರ್ ಪಟ್ಟಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 19 ವರ್ಷದ ಅವಿವಾಹಿತ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಮೇಲೆ ತಂದೆಯೇ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅವಿವಾಹಿತ ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದಾಗ ಈ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಪೋಲಿಸರ ಮಾಹಿತಿಯ ಪ್ರಕಾರ, 19 ವರ್ಷದ ಯುವತಿಗೆ ಅನಾರೋಗ್ಯದ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದಾಗ ಎಲ್ಲರೂ ದಿಗ್ಬ್ರಮೆಗೊಂಡಿದ್ದಾರೆ.
ನವಜಾತ ಶಿಶುವಿನ ತಂದೆಯ ಬಗ್ಗೆ ಪ್ರಶ್ನಿಸಿದಾಗ, ತನ್ನ ತಂದೆಯೇ ಇದಕ್ಕೆ ಕಾರಣವೆಂದು ಯುವತಿ ತಿಳಿಸಿದ್ದಾಳೆ. ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅಥವಾ ಆಕೆ ಮಲಗಿದ್ದ ವೇಳೆ ಅನೇಕ ಬಾರಿ ತಂದೆಯೇ ಅತ್ಯಾಚಾರ ಎಸಗಿದ್ದಾನೆ. ಲೈಂಗಿಕ ದೌರ್ಜನ್ಯದ ಪರಿಣಾಮ ಯುವತಿ ಗರ್ಭಿಣಿಯಾಗಿದ್ದಾಳೆ. ಯುವತಿ ಮತ್ತು ನವಜಾತ ಶಿಶುವನ್ನು ಭಾವಾನಗರದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಭಾವಾನಗರ ಮಹಿಳಾ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಆರೋಪಿತನಿಗೆ ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು ಇದ್ದು, ಮೂವರು ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಆರೋಪಿ ಪತ್ನಿ, ಕಿರಿಯ ಪುತ್ರಿಯೊಂದಿಗೆ ಶಿಹೋರ್ ಪಟ್ಟಣದ ಕೊಳಗೇರಿಯಲ್ಲಿ ವಾಸವಾಗಿದ್ದ.