ದೇಶದಲ್ಲಿ ಒಂದು ಕಡೆ ಕೊರೊನಾ ಕಾಟವಾದ್ರೆ ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಜೊತೆ ಈಗ ಯಲ್ಲೋ ಫಂಗಸ್ ಸಮಸ್ಯೆ ಶುರುವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ ಕಾಣಿಸಿಕೊಂಡಿದೆ. ಇದಕ್ಕೆ ತುತ್ತಾದ ವ್ಯಕ್ತಿಯೊಬ್ಬನಿಗೆ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಆಲಸ್ಯ, ಹಸಿವಿನ ಕೊರತೆ ಅಥವಾ ಹಸಿವಾಗದಿರುವುದು ಹಳದಿ ಶಿಲೀಂಧ್ರ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಾಗಿವೆ. ಈ ರೋಗಿಯ ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ರೋಗ ಹೆಚ್ಚಾಗ್ತಿದ್ದಂತೆ ಕೀವು, ನಿಧಾನವಾಗಿ ಗುಣವಾಗುವ ಗಾಯ, ಅಪೌಷ್ಟಿಕತೆ ಕಾಡುತ್ತದೆ. ಅಂಗಗಳ ಕಾರ್ಯನಿರ್ವಹಣೆ ಕಡಿಮೆಯಾಗುತ್ತದೆ. ರೋಗಿಯ ಕಣ್ಣುಗಳು ಒಳಗೆ ಹೋಗಲು ಶುರುವಾಗುತ್ತದೆ.
ಹಳದಿ ಶಿಲೀಂಧ್ರ, ಬಿಳಿ ಹಾಗೂ ಕಪ್ಪು ಫಂಗಸ್ ಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಆರಂಭಿಕ ಲಕ್ಷಣದಲ್ಲಿಯೇ ಚಿಕಿತ್ಸೆ ಸಿಕ್ಕಲ್ಲಿ ರೋಗ ಬೇಗ ಗುಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೊಳಕು ಹಾಗೂ ತೇವಾಂಶ. ಮನೆ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬ್ಯಾಕ್ಟೀರಿಯಾ, ಶಿಲೀಂಧ್ರ ಬೆಳೆಯದಂತೆ ನೋಡಿಕೊಳ್ಳಬೇಕು.