ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಉಚಿತವಾಗಿ ಆಹಾರ ಒದಗಿಸಲು ಆದೇಶಿಸಲಾಗಿದೆ.
ಕೂಲಿ ಕಾರ್ಮಿಕರು, ಬಡವರು, ವಲಸಿಗರು, ದುರ್ಬಲ ವರ್ಗದವರಿಗೆ ಹಸಿವು ನೀಗಿಸಲು ಮೇ 24 ರ ವರೆಗೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಆಹಾರ ಒದಗಿಸಲಾಗುವುದು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ 170ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಗಳು, ಬೆಂಗಳೂರಿನಲ್ಲಿರುವ 150 ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್ ಗಳು ಮತ್ತು 30 ಕ್ಕೂ ಅಧಿಕ ಮೊಬೈಲ್ ಕ್ಯಾಂಟೀನ್ ಗಳಲ್ಲಿ ಲಾಕ್ಡೌನ್ ಮುಗಿಯುವವರೆಗೆ ಉಚಿತವಾಗಿ ಆಹಾರ ಒದಗಿಸಲು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಆಹಾರ ಪೂರೈಕೆ ಸಂಬಂಧ ಗುತ್ತಿಗೆದಾರರಿಗೆ ಬಾಕಿ ಪಾವತಿಸಲು ಸೂಚನೆ ನೀಡಲಾಗಿದೆ. ಮೇ 24 ರವರೆಗೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಉಚಿತವಾಗಿ ಆಹಾರ ಪೂರೈಕೆ ಮಾಡಲಾಗುವುದು ಎಂದು ಹೇಳಲಾಗಿದೆ.