ಬೆಂಗಳೂರು: ಕೊರೋನಾ ಪರಿಸ್ಥಿತಿ ಸೂಕ್ಷ್ಮ ಎಂದು ಪರಿಗಣಿಸಲ್ಪಟ್ಟ ರಾಜ್ಯದ 10 ಜಿಲ್ಲೆಗಳಲ್ಲಿ ಶೇಕಡ 100 ರಷ್ಟು ಭೌತಿಕ ತಪಾಸಣಾ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಮಾತನಾಡುತ್ತಿದ್ದರು.
ಈಗ ಜಿಲ್ಲೆಗಳಲ್ಲಿ ಕರೋನಾ ಪರಿಸ್ಥಿತಿ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆದ ಸಚಿವರು, ಇದನ್ನು ಇನ್ನೂ ಪರಿಣಾಮಕಾರಿಯಾಗಿಸಲು ಪ್ರತಿ ಜಿಲ್ಲೆಯಲ್ಲೂ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾರ್ಡ್ ವಾರು (ಟ್ರಯೇಜಿಂಗ್ ಸೆಂಟರ್) ಭೌತಿಕ ತಪಾಸಣಾ ಕೇಂದ್ರ ಆರಂಭಿಸುವ ಬಗ್ಗೆ ಜಿಲ್ಲಾಡಳಿತಗಳ ಅಭಿಪ್ರಾಯ ಮುಖ್ಯ ಎಂದರು.
ಜಿಲ್ಲಾಮಟ್ಟದಲ್ಲಿ ಭೌತಿಕ ತಪಾಸಣಾ ಕೇಂದ್ರ ಆರಂಭಕ್ಕೆ ಬೇಕಾದ ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಲಭ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ತಿಳಿಸುವಂತೆ ಸೂಚಿಸಿದರು, ಸಂಚಾರಿ ತಪಾಸಣಾ ಕೇಂದ್ರ ಆರಂಭಿಸುವುದು ಕುರಿತಂತೆ ಅನೇಕ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ಸಚಿವ ಅರವಿಂದ ಲಿಂಬಾವಳಿ ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ, ಹುಬ್ಬಳ್ಳಿ -ಧಾರವಾಡ, ಗುಲ್ಬರ್ಗ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಮಡಿಕೇರಿ, ಉಡುಪಿ, ಮಂಡ್ಯ ಜಿಲ್ಲೆಯ ಅಧಿಕಾರಿಗಳು ಭಾಗವಹಿಸಿದ್ದರು.