ಇಂದಿನಿಂದ 18 ರಿಂದ 45 ವರ್ಷ ವಯಸ್ಸಿನವರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ. ಮೊದಲೇ ನೊಂದಾಯಿಸಿಕೊಂಡು ಎಸ್ಎಂಎಸ್ ಬಂದವರಿಗೆ ಮಾತ್ರ ಲಸಿಕೆ ನೀಡಲಾಗುವುದು.
ಆದರೆ, ಎರಡನೇ ಡೋಸ್ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಇನ್ನು ಕಾಯುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆಯಾಗುತ್ತಿಲ್ಲ. ಈ ಮೊದಲು ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡಲಾಗಿದ್ದು, ಮೊದಲ ಡೋಸ್ ಪಡೆದುಕೊಂಡವರು 2 ಎರಡನೇ ಡೋಸ್ ಪಡೆಯಲು ಕಾಯುವಂತಾಗಿದೆ. ಅವಧಿ ಮುಗಿದರೂ ಲಸಿಕೆ ಸಿಗದ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.
1 ವಯಲ್ ಓಪನ್ ಮಾಡಿದರೆ 10 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯವಿರುವಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ. 2 -3 ವಯಲ್ ಮಾತ್ರ ಬರುತ್ತಿದ್ದು, ಮೊದಲು ಬಂದ 30 ಮಂದಿ ಲಸಿಕೆ ಪಡೆದ ನಂತರ ಉಳಿದವರು ವಾಪಸ್ ತೆರಳುವಂತಾಗಿದೆ. ಕೆಲವೆಡೆ ಬೆಳಿಗ್ಗೆಯಿಂದಲೇ ಲಸಿಕೆ ಪಡೆಯಲು ಉದ್ದನೆಯ ಸರತಿ ಸಾಲು ಕಂಡುಬಂದಿದೆ.
ಇನ್ನು ಖಾಸಗಿ ಆಸ್ಪತ್ರೆಗಳಿಗೆ ಯಾವಾಗ ಲಸಿಕೆ ಪೂರೈಕೆಯಾಗುತ್ತದೆ ಎನ್ನುವ ಮಾಹಿತಿ ಕೂಡ ಇಲ್ಲವಾಗಿದೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು 6 -8 ವಾರಗಳ ನಂತರದಲ್ಲಿ ಎರಡನೇ ಡೋಸ್ ಪಡೆದುಕೊಳ್ಳಬೇಕಿದೆ. ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದವರು 4 -6 ವಾರದೊಳಗೆ ಎರಡನೇ ಡೋಸ್ ಪಡೆಯಬೇಕಿದೆ ಎನ್ನಲಾಗಿದ್ದು, ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಎಂಬ ನಿಯಮ ಜಾರಿಯಾಗಿರುವುದರಿಂದ ಎಲ್ಲಿಯೂ ಲಸಿಕೆಗೆ ಕಾಯುವಂತಾಗಿದೆ.
ಕೋವಿಶೀಲ್ಡ್ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ನಲ್ಲೂ ಅದನ್ನೇ ಪಡೆಯಬೇಕಿದೆ. ಅದೇ ರೀತಿ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಕೂಡ ಎರಡನೇ ಡೋಸ್ ನಲ್ಲೂ ಅದನ್ನೇ ಪಡೆಯಬೇಕಿದೆ ಎನ್ನಲಾಗಿದ್ದು. ಹಿಂದೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ ಮಾಡಿದ್ದರಿಂದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್ ಪಡೆದುಕೊಂಡವರು ಅವಧಿ ಮುಗಿದರೂ ಎರಡನೇ ಡೋಸ್ ಸಿಗದೇ ಕಾಯುವಂತಾಗಿದೆ. ಇದರಿಂದ ಗೊಂದಲ ಉಂಟಾಗಿದೆ ಎನ್ನಲಾಗಿದೆ.
ಮೇ 1 ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಹೇಳಲಾಗಿತ್ತಾದರೂ ಅಗತ್ಯವಿರುವಷ್ಟು ಲಸಿಕೆ ಪೂರೈಕೆಯಾಗದ ಕಾರಣದಿಂದ ಮೇ 10 ರಿಂದ ಲಸಿಕೆ ನೀಡಲಾಗುತ್ತಿದೆ. ಇನ್ನು ಖಾಸಗಿಯವರಿಗೆ ಈಗ ಲಸಿಕೆ ಪೂರೈಕೆಯಾಗುತ್ತಿಲ್ಲ. ಇಂದಿನಿಂದ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಲಸಿಕೆ ಪಡೆದುಕೊಂಡವರು ಎರಡನೇ ಡೋಸ್ ಲಸಿಕೆಗೆಗಾಗಿ ಈಗ ಸರ್ಕಾರಿ ಆಸ್ಪತ್ರೆಗೆ ಮೊರೆ ಹೋಗಬೇಕಾಗಿದೆ. ಆದರೆ ಅಲ್ಲಿಯೂ ಈಗಾಗಲೇ ಬಹುತೇಕ ಸ್ಲಾಟ್ ಬುಕ್ ಆಗಿರುವ ಕಾರಣ ಲಭ್ಯವಿರುವ ದಿನಾಂಕದಂದೇ ಅನಿವಾರ್ಯವಾಗಿ ಲಸಿಕೆ ಪಡೆದುಕೊಳ್ಳಬೇಕಾಗಿದೆ.