ಕಳೆದ ಒಂದು ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ಜನ ಜೀವನವನ್ನು ಅಕ್ಷರಶಃ ನರಕ ಮಾಡಿದೆ. ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಾರ್ವಜನಿಕರು ಕುಗ್ಗಿಹೋಗಿದ್ದಾರೆ.
ಎರಡನೇ ಅಲೆ ಈಗ ತೀವ್ರವಾಗಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇಷ್ಟಾದರೂ ಸಹ ಮಹಾಮಾರಿಯ ಅಬ್ಬರ ತಗ್ಗಿಲ್ಲ. ಇದರ ಮಧ್ಯೆಯೂ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಂಡ ಘಟನೆ ನಡೆದಿದೆ.
‘ವೀಕೆಂಡ್ ಕರ್ಫ್ಯೂ’ ಮಧ್ಯೆ ಕೊರೊನಾ ಸೋಂಕಿತ ರಸ್ತೆಗೆ ಬಂದಾಗ……
ತಿರುವನಂತಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಭಾನುವಾರದಂದು ಶರತ್ ಮತ್ತು ಅಭಿರಾಮಿ ಎಂಬ ಈ ಜೋಡಿ ಸತಿ-ಪತಿಗಳಾಗಿದ್ದಾರೆ. ಶರತ್ ವಿದೇಶದಲ್ಲಿದ್ದು 2 ವರ್ಷಗಳ ಹಿಂದೆಯೇ ಇವರುಗಳ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.
ಆದರೆ ಕೊರೊನಾ ಕಾರಣಕ್ಕೆ ಶರತ್ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಅವರು ಬಂದಿದ್ದು ಆದರೆ ಅವರು ಹಾಗೂ ಅವರ ತಾಯಿಗೆ ಕೊರೊನಾ ಸೋಂಕು ತಗಲಿದೆ. ಹೀಗಾಗಿ ಅವರುಗಳು ಆಸ್ಪತ್ರೆಗೆ ದಾಖಲಾಗಿದ್ದು, ಇದರ ಮಧ್ಯೆ ಸದ್ಯಕ್ಕೆ ಯಾವುದೇ ಒಳ್ಳೆಯ ಮಹೂರ್ತ ಇಲ್ಲ ಎಂಬುದು ಸಂಬಂಧಿಕರಿಗೆ ಗೊತ್ತಾಗಿದೆ.
ಹೀಗಾಗಿ ಭಾನುವಾರ ಶುಭದಿನ ಎಂಬುದನ್ನು ತಿಳಿದುಕೊಂಡ ಸಂಬಂಧಿಕರು ಆಸ್ಪತ್ರೆಯಲ್ಲೇ ಮದುವೆ ಮಾಡಿಸಲು ತೀರ್ಮಾನಿಸಿದ್ದು, ಇದಕ್ಕೆ ಆಸ್ಪತ್ರೆಯ ಸಿಬ್ಬಂದಿ ಸಹ ಸಮ್ಮತಿಸಿದ್ದಾರೆ.
ಹೀಗಾಗಿ ಅಭಿರಾಮಿ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಬಂದಿದ್ದು, ಶರತ್ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶರತ್ ಅವರ ತಾಯಿ ಹಾಗೂ ಆಸ್ಪತ್ರೆಯ ಕೆಲ ಸಿಬ್ಬಂದಿ ಹಾಜರಿದ್ದರು ಎನ್ನಲಾಗಿದೆ. ಮದುವೆ ಬಳಿಕ ಅಭಿರಾಮಿ ಆಸ್ಪತ್ರೆಯಿಂದ ತೆರಳಿದ್ದಾರೆ.