ನವದೆಹಲಿ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂದು 10 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದು, ಮೈಕ್ರೋ ಕಂಟೇನ್ಮೆಂಟ್ ನಿಯಮ ಕಠಿಣ ಪಾಲನೆ, ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ ನೀಡಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಿರುವ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಸೇರಿದಂತೆ 10 ರಾಜ್ಯಗಳ ಸಿಎಂ ಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ಮೊದಲ ಅಲೆ, ರೂಪಾಂತರಿ ವೈರಸ್ ನ ವ್ಯತ್ಯಾಸದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು. ಕಳೆದ ಬಾರಿಗಿಂತ 4 ಪಟ್ಟು ಹೆಚ್ಚು ಸೋಂಕು ಹರಡುತ್ತಿದ್ದು, ಮಧ್ಯವಯಸ್ಕರರಲ್ಲಿ ಕೂಡ ವೇಗವಾಗಿ ಹರಡುತ್ತಿದೆ ಎಂದು ಹೇಳಿದರು.
ಸೋಂಕಿತರೆಲ್ಲರೂ ಆಸ್ಪತ್ರೆಗಳಿಗೆ ಹೋಗುತ್ತಿರುವುದರಿಂದ ವೈದ್ಯರಿಗೂ ನಿರ್ವಹಣೆ ಕಷ್ಟಸಾಧ್ಯ. ಹಾಗಾಗಿ ಹೋಂ ಐಸೋಲೇಷನ್ ಗೆ ಆದ್ಯತೆ ನೀಡಿ, ಟೆಲಿ ಕಾಲಿಂಗ್ ಮೂಲಕ ಮಾರ್ಗದರ್ಶನ ನೀಡುವಂತೆ ಸೂಚಿಸಿದ್ದಾರೆ. ಈ ತಿಂಗಳಾಂತ್ಯಕ್ಕೆ ಪ್ರತಿದಿನ 1000 ಟನ್ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ರೆಮ್ ಡಿಸಿವಿರ್ ಪೂರೈಕೆಯನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬೆಂಗಳೂರಿಗೆ ಮೇಕ್ ಶಿಫ್ಟ್ ಆಸ್ಪತ್ರೆಗಳ ಬಗ್ಗೆ ಹೇಳಿದ್ದಾರೆ ಎಂದು ವಿವರಿಸಿದರು.