ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್ ಭರ್ಜರಿ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 16.3 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸಿ ಭರ್ಜರಿ ಜಯಗಳಿಸಿದೆ. ಇದರೊಂದಿಗೆ ಕೊಹ್ಲಿ ಪಡೆ ಸತತ 4 ನೇ ಗೆಲುವು ಪಡೆದಿದೆ.
ವಿರಾಟ್ ಕೊಹ್ಲಿ ಅಜೇಯ 72 ಮತ್ತು ದೇವದತ್ ಪಡಿಕ್ಕಲ್ ಅಜೇಯ 101 ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಶತಕ ಗಳಿಸಿದ ಅಂತರಾಷ್ಟ್ರೀಯ ಕ್ರಿಕೆಟ್ ಆಟದ ಮೂರನೇ ಆಟಗಾರ ದೇವದತ್ ಪಡಿಕಲ್.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಚೆನ್ನೈ ತಂಡದ ಸುರೇಶ್ ರೈನಾ 5448 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ 6000 ರನ್ ಕಲೆಹಾಕುವ ಮೂಲಕ ಐಪಿಎಲ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. 196 ಪಂದ್ಯವಾಡಿರುವ ಕೊಹ್ಲಿ 188 ಇನ್ನಿಂಗ್ಸ್ ಗಳಲ್ಲಿ 6021 ರನ್ ಗಳಿಸಿದ್ದು, ಇದರಲ್ಲಿ 40 ಅರ್ಧಶತಕ ಮತ್ತು 5 ಶತಕ ಸಿಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ವಿರುದ್ಧ 200 ನೇ ಆಡಿ ಭರ್ಜರಿ ಜಯಗಳಿಸಿದೆ. ಮುಂಬೈ ಇಂಡಿಯನ್ಸ್ 207 ಪಂದ್ಯವಾಡಿದೆ. ಆರ್ಸಿಬಿ ಆಡಿದ 200 ಪಂದ್ಯಗಳಲ್ಲಿ 92 ಪಂದ್ಯಗಳಲ್ಲಿ ಜಯಗಳಿಸಿದೆ. ಎರಡು ಟೈ ಪಂದ್ಯಗಳನ್ನು ಸೂಪರ್ ಓವರ್ ನಲ್ಲಿ ಜಯಿಸಿದೆ. 1 ಪಂದ್ಯ ಸೋತಿದ್ದು, 4 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ದಾಖಲಾಗಿಲ್ಲ. 100 ಪಂದ್ಯಗಳಲ್ಲಿ ಸೋಲು ಕಂಡಿದೆ.