ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು ನಾಲ್ವರು ಸಜೀವ ದಹನವಾದ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಆಸ್ಪತ್ರೆಯಲ್ಲಿದ್ದ 27 ರೋಗಿಗಳನ್ನ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರೋಗಿಗಳ ಆರೋಗ್ಯ ಸ್ಥಿತಿ ಬಗ್ಗೆ ಈಗಲೇ ನಾವು ಏನನ್ನೂ ಹೇಳಲು ಬರೋದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ರೋಗಿಗಳ ಪರಿಸ್ಥಿತಿ ಗಂಭೀರವಾಗಿದೆ. ಈ ಆಸ್ಪತ್ರೆಯಲ್ಲಿ 30 ಹಾಸಿಗೆಯ ವ್ಯವಸ್ಥೆ ಇದ್ದು ಇದರಲ್ಲಿ 15 ಐಸಿಯು ಬೆಡ್ಗಳಾಗಿದ್ದವು. ಆಸ್ಪತ್ರೆಯ ಎರಡನೇ ಮಹಡಿಯಲ್ಲಿದ್ದ ಐಸಿಯುವಿನ ಎಸಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಎರಡನೇ ಮಹಡಿಯಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದ್ದು ಬೇರೆ ಮಹಡಿಗಳಿಗೆ ವ್ಯಾಪಿಸಿಲ್ಲ ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೋರೇಷನ್ ಅಗ್ನಿಶಾಮಕ ದಳ ಮುಖ್ಯಸ್ಥ ರಾಜೇಂದ್ರ ಉಚ್ಕೆ ಮಾಹಿತಿ ನೀಡಿದ್ದಾರೆ.