ಬೆಂಗಳೂರು: ಮನೆ ಮತ್ತು ನಿವೇಶನ ಖರೀದಿಸುವವರು ಹಾಗೂ ಮಾರಾಟಗಾರರಿಗೆ ಅನುಕೂಲವಾಗುವಂತೆ ಬೆಂಗಳೂರಿನ 100 ವಾರ್ಡ್ ಗಳಲ್ಲಿ ಇ -ಆಸ್ತಿ ಸಾಫ್ಟ್ ವೇರ್ ಜಾರಿಗೊಳಿಸಲಾಗಿದೆ. ಇ – ಆಸ್ತಿ ಸಾಫ್ಟ್ ವೇರ್ ಮೂಲಕ ಸ್ವತ್ತುಗಳನ್ನು ಹಲವರಿಗೆ ಮಾರಾಟ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದಕ್ಕೆ ಬ್ರೇಕ್ ಹಾಕಲಾಗಿದೆ.
ಬೆಂಗಳೂರಿನ ಮಹಾನಗರಪಾಲಿಕೆಯ 100 ವಾರ್ಡ್ ಗಳಲ್ಲಿ ಎಲ್ಲಾ ಆಸ್ತಿಗಳ ದತ್ತಾಂಶವನ್ನು ಸಂಗ್ರಹಿಸಿ ಇ – ಆಸ್ತಿ ಸಾಫ್ಟ್ ವೇರ್ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆಸ್ತಿಗಳಿಗೆ ಜಿಐಎಸ್ ಮ್ಯಾಪಿಂಗ್ ಮಾಡಲಾಗಿದ್ದು, ಆಸ್ತಿ ದಾಖಲಾತಿಗಳ ಬಗ್ಗೆ 48 ಬಗೆಯ ದತ್ತಾಂಶ ಸಂಗ್ರಹಿಸಿ ಸಾಫ್ಟ್ ವೇರ್ ನಲ್ಲಿ ಅಳವಡಿಸಲಾಗಿದೆ. ಆಸ್ತಿ ಖಾತೆಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯವಿದೆ. ಮಾಲೀಕರು ತಮಗೆ ಅಗತ್ಯವಾದಾಗ 125 ರೂಪಾಯಿ ಪಾವತಿಸಿ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.
ಇ -ಆಸ್ತಿ ಸಾಫ್ಟ್ವೇರ್ ನೆರವಿನಿಂದ ಆಸ್ತಿ ಇರುವ ಪ್ರತಿ ಮಾಲೀಕರು ಆಧಾರ್ ಸಂಖ್ಯೆ ಜೋಡಣೆಯೊಂದಿಗೆ ಡಿಜಿಲಾಕರ್ ಖಾತೆ ತೆರೆದು ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳ ಮಾಹಿತಿಯನ್ನು ಇದರಲ್ಲಿ ಸಂಗ್ರಹಿಸಬಹುದು. ಆಸ್ತಿ ಮಾರಾಟ, ಮಾಲೀಕತ್ವ ವರ್ಗಾವಣೆ ಮೊದಲಾದವುಗಳಿಗೆ ಮುಂದಿನ ದಿನಗಳಲ್ಲಿ ಡಿಜಿಟಲ್ ಸಹಿ ದಾಖಲೆ ಪಡೆಯಬೇಕಾಗುತ್ತದೆ. ಅನಧಿಕೃತವಾಗಿ ಆಸ್ತಿ ಮಾರಾಟ ಮಾಡುವುದು, ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಲಾಗಿದೆ.