ಚೆನ್ನೈ: ತಮಿಳುನಾಡಿನಲ್ಲಿ ಪೆಟ್ರೋಲ್ ಮೂಲ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಅಂದ ಹಾಗೆ, ಪೆಟ್ರೋಲ್ ಬೆಲೆ 100 ರೂಪಾಯಿ ಸಮೀಪಿಸುತ್ತಿರುವಂತೆ ವಾಹನ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಒಂದು ಲೀಟರ್ ಪೆಟ್ರೋಲ್ ಮೂಲಬೆಲೆ 32.28 ರೂಪಾಯಿ ಇದೆ. ಇದಕ್ಕೆ ಕೇಂದ್ರ ಅಬಕಾರಿ ಸುಂಕ 32.90 ರೂಪಾಯಿ ಇದ್ದು ಪೆಟ್ರೋಲ್ ಮೂಲ ಬೆಲೆಗಿಂತಲೂ ಜಾಸ್ತಿಯಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆ 22.84 ರೂಪಾಯಿ ಇದ್ದು, ಜನಸಾಮಾನ್ಯರು 32.28 ರೂಪಾಯಿ ಬೆಲೆಯ ಒಂದು ಲೀಟರ್ ಪೆಟ್ರೋಲ್ ಗೆ 55.74 ರೂಪಾಯಿ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇದರೊಂದಿಗೆ ಸಾಗಣೆ ಶುಲ್ಕ, ವಿತರಕರ ಕಮಿಷನ್ ಕೂಡ ನೀಡಬೇಕಿದೆ.(ಸುಮಾರು 4 ರೂ.)
ಅದೇ ರೀತಿ ಡೀಸೆಲ್ ಒಂದು ಲೀಟರ್ ಗೆ ಜನಸಾಮಾನ್ಯರು 48.67 ರೂಪಾಯಿ ತೆರಿಗೆ ಮತ್ತು ಇತರೆ ಶುಲ್ಕ ಪಾವತಿಸುತ್ತಿದ್ದಾರೆ. 1 ಲೀಟರ್ ಡೀಸೆಲ್ ನ ಮೂಲ ಬೆಲೆ 33.80 ರೂ. ಇದ್ದು, ಕೇಂದ್ರದ ಅಬಕಾರಿ ಸುಂಕ 31.80 ರೂ. ಇದೆ. ಇದರೊಂದಿಗೆ ರಾಜ್ಯ ತೆರಿಗೆ 16.87 ರೂಪಾಯಿ ಇದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಅಡಿ ತರಬೇಕೆಂಬ ಚರ್ಚೆ ನಡೆಯುತ್ತಿದೆ. ವ್ಯಾಟ್ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಹೇಳುತ್ತಿದ್ದರೆ ಕಳೆದ ವರ್ಷ ಕೇಂದ್ರ ವಿಧಿಸಿದ್ದ ಸೆಸ್ ಕಡಿಮೆ ಮಾಡಲಿ ಎನ್ನುವುದು ರಾಜ್ಯದ ಅಭಿಪ್ರಾಯವಾಗಿದೆ.
2020 ರಲ್ಲಿ ಇಂಧನಗಳ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಭಾರೀ ಹೆಚ್ಚಳ ಮಾಡಲಾಗಿದೆ. ಅಂತರಾಷ್ಟ್ರೀಯ ತೈಲ ಬೆಲೆ ಕುಸಿತದಿಂದ ಉಂಟಾಗುವ ಪ್ರಯೋಜನಕ್ಕಾಗಿ ಸರ್ಕಾರ ಕಳೆದ ವರ್ಷ ಅಬಕಾರಿ ಸುಂಕವನ್ನು 16 ರೂ.ನಷ್ಟು ಏರಿಕೆ ಮಾಡಿತ್ತು. ಈಗ ತೈಲ ಬೆಲೆ ಏರಿಕೆಯಾಗಿದ್ದರೂ ಸುಂಕವನ್ನು ಕಡಿತಗೊಳಿಸಿಲ್ಲ. ಇದರ ಪರಿಣಾಮ ಇಂಧನ ಬೆಲೆ ದಾಖಲೆಯ ಮಟ್ಟಕ್ಕೆ ತಲುಪಿದೆ. ಇದರ ಪರಿಣಾಮ ವಾಹನ ಸವಾರರು ತೈಲದ ಮೂಲ ಬೆಲೆಗಿಂತ ಎರಡು ಪಟ್ಟು ಜಾಸ್ತಿ ತೆರಿಗೆ ಪಾವತಿಸುವ ಸಮಯ ಇದಾಗಿದೆ ಎಂದು ಹೇಳಲಾಗಿದೆ.