ನವದೆಹಲಿ: ಇಪಿಎಫ್‌ಒನ 6 ಕೋಟಿಗೂ ಹೆಚ್ಚು ಚಂದಾದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಚಂದಾದಾರರಿಗೆ ಮುಂದಿನ ದಿನಗಳಲ್ಲಿ ಕೆಟ್ಟ ಸುದ್ದಿ ಸಿಗಲಿದೆ. ಈ ವರ್ಷದ ಬಡ್ಡಿದರಗಳನ್ನು ಸರ್ಕಾರ ಮತ್ತಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ.
ಇದಕ್ಕೆ ಮುಖ್ಯ ಕಾರಣ ಕೊರೊನಾ ವೈರಸ್ ಎನ್ನಲಾಗ್ತಿದೆ. ಮಾರ್ಚ್ 4 ರಂದು ಸಭೆ ನಡೆಯಲಿದ್ದು, ಅದ್ರಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ಕಳೆದ ಕೆಲವು ವರ್ಷಗಳಲ್ಲಿ ಬಡ್ಡಿದರದ ಕುಸಿತ ಪಿಎಫ್ ಗಳಿಕೆ ಮೇಲೆ ಪ್ರಮುಖ ಪರಿಣಾಮ ಬೀರಿದೆ.
ಇಪಿಎಫ್‌ಒ ತನ್ನ ಹೆಚ್ಚಿನ ಷೇರುಗಳನ್ನು ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತದೆ. ಹಿಂದಿನ ವರ್ಷ 2020 ರ ಹಣಕಾಸು ವರ್ಷದಲ್ಲಿ ಶೇಕಡಾ 8.5 ರಷ್ಟು ಬಡ್ಡಿಯನ್ನು ಸರ್ಕಾರ ನಿಗದಿಪಡಿಸಿತ್ತು. ಇದು ಏಳು ವರ್ಷಗಳಲ್ಲಿ ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು. 2019 ರ ಹಣಕಾಸು ವರ್ಷದಲ್ಲಿ ಈ ದರವು ಶೇಕಡಾ 8.65 ರಷ್ಟಿತ್ತು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇಪಿಎಫ್‌ನಲ್ಲಿ ಪಾವತಿಸಬೇಕಾದ ಬಡ್ಡಿದರವನ್ನು ಇಪಿಎಫ್‌ಒ ಕೇಂದ್ರ ಮಂಡಳಿಯ ಟ್ರಸ್ಟಿಗಳ 228 ನೇ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ. ಈ ಸಭೆ ಮಾರ್ಚ್ 4 ರಂದು ನಡೆಯಲಿದೆ. ಸಿಬಿಟಿ ಸಭೆಯ ಮೊದಲು ಎಫ್‌ಐಎಸಿ ಸಭೆ ನಡೆಯುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಆಧಾರದ ಮೇಲೆ ಪಿಎಫ್ ಮೇಲಿನ ಬಡ್ಡಿದರವನ್ನು ನಿರ್ಧರಿಸುವ ಸಾಧ್ಯತೆಯಿದೆ.
ಇದಕ್ಕಿಂತ ಮೊದಲು 2021ರ ಬಜೆಟ್ ನಲ್ಲಿಯೇ ಪಿಎಫ್ ಚಂದಾದಾರರಿಗೆ ಕೆಟ್ಟ ಸುದ್ದಿಯೊಂದು ಸಿಕ್ಕಿದೆ. ಪಿಎಫ್ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ನೀಡುವ ನಿಯಮಗಳನ್ನು ಬದಲಾಯಿಸಲಾಗಿದೆ. ಹೊಸ ನಿಯಮವು ಹೆಚ್ಚಿನ ಆದಾಯ ಪಡೆಯುವ ನೌಕರರಿಗೆ ಅನ್ವಯಿಸುತ್ತದೆ. ಪಿಎಫ್ ವಾರ್ಷಿಕ ಕೊಡುಗೆ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ, 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಬರುವ ಬಡ್ಡಿಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.