ಚುನಾವಣಾ ಅಕ್ರಮಗಳು ಒಂದೆರಡು ಥರ ಇಲ್ಲ. ಪ್ರತಿ ಚುನಾವಣೆಯಲ್ಲೂ ಸಹ ಗೆಲ್ಲಲೇಬೇಕು ಎಂದು ದುಡ್ಡು-ಪ್ರಭಾವ ಹೆಚ್ಚಾಗಿರುವ ಮಂದಿ ಹೊಸ ಹೊಸ ಅಕ್ರಮ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಉಮ್ರಾಣೆ ಹಾಗೂ ಖೊಂಡಮಾಲಿ ಗ್ರಾಮದ ಸರ್ಪಂಚ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಹುದ್ದೆಗಳನ್ನೇ ಹರಾಜಿಗೆ ಇಡಲು ಮುಂದಾದ ಘಟನೆ ಬೆಳಕಿಗೆ ಬರುತ್ತಲೇ ರಾಜ್ಯ ಚುನಾವಣಾ ಆಯುಕ್ತ ಯು.ಪಿ.ಎಸ್. ಮದನ್ ಗ್ರಾಮ ಪಂಚಾಯಿತಿ ಚುನಾವಣೆ ರದ್ದು ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಮದನ್, “ಉಮ್ರಾಣೆ ಹಾಗೂ ಖೊಂಡಮಾಲಿ ಗ್ರಾಮ ಪಂಚಾಯಿತಿಗಳ ಸರಪಂಚರು ಹಾಗೂ ಗ್ರಾ.ಪಂ ಸದಸ್ಯರ ಹುದ್ದೆಗಳನ್ನು ಹರಾಜಿಗೆ ಇಟ್ಟಿರುವ ಸುದ್ದಿಗಳು ಪತ್ರಿಕೆಗಳಲ್ಲಿ ಸದ್ದು ಮಾಡಿವೆ. ಈ ಸಂಬಂಧ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾ ವೀಕ್ಷಕರ ವರದಿಗಳನ್ನು ತರಿಸಲಾಗಿದೆ. ದೂರುಗಳು ಹಾಗೂ ವರದಿಗಳ ಪರಿಶೀಲನೆ ನಡೆಸಿದ ಬಳಿಕ ಚುನಾವಣೆ ರದ್ದು ಮಾಡುವ ನಿರ್ಧಾರಕ್ಕೆ ಬರಲಾಗಿದೆ” ಎಂದು ತಿಳಿಸಿದ್ದಾರೆ.
ಡಿಸೆಂಬರ್ 27ರಂದು ನಡೆಸಲಾದ ಈ ಹರಾಜಿನಲ್ಲಿ ಸರ್ಪಂಚರ ಹುದ್ದೆಗೆ ಆರಂಭಿಕ ಬೆಲೆಯು 1.1 ಕೋಟಿ ರೂ.ಗಳಿಂದ ಆರಂಭಗೊಂಡು ಎರಡು ಕೋಟಿ ರೂ.ಗಳವರೆಗೂ ಬಿಕರಿಯಾಗಿತ್ತು ಎಂದು ತೋರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಕೆಲಸದ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ನಾಸಿಕ್ ಜಿಲ್ಲಾಧಿಕಾರಿಗೆ ಆದೇಶ ನೀಡಲಾಗಿದೆ.