ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ 27 ನೇ ಟೆಸ್ಟ್ ಶತಕ ಸಿಡಿಸಿ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಉತ್ತಮ ಪ್ರದರ್ಶನ ತೋರಿರಲಿಲ್ಲ. ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 2 ರನ್ ಗಳಿಸಿದ್ದರು. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ 8 ರನ್ ಗಳಿಸಿದ್ದರು. ಸ್ಟೀವ್ ಸ್ಮಿತ್ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ ನಲ್ಲಿ ಒಟ್ಟು 10 ರನ್ ಗಳಿಸಿದ್ದರು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ, ಸ್ಟೀವ್ ಸ್ಮಿತ್ ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಫಾರ್ಮ್ಗೆ ಮರಳಿದ್ದಾರೆ. ಸ್ಟೀವ್ ಸ್ಮಿತ್ ತಮ್ಮ 27 ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಸ್ಮಿತ್ 14 ಇನ್ನಿಂಗ್ಸ್ ನಂತರ ಟೆಸ್ಟ್ ಶತಕ ಬಾರಿಸಿದ್ದಾರೆ. ಇದಕ್ಕೂ ಮೊದಲು ಸೆಪ್ಟೆಂಬರ್ 4, 2019 ರಂದು ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ 211 ರನ್ ಗಳಿಸಿದ್ದರು.
ಡಾನ್ ಬ್ರಾಡ್ಮನ್ ನಂತರ ವೇಗವಾಗಿ 27 ಟೆಸ್ಟ್ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟೀವ್ ಸ್ಮಿತ್ ಪಾತ್ರರಾಗಿದ್ದಾರೆ. ಡಾನ್ ಬ್ರಾಡ್ಮನ್ 70 ಇನ್ನಿಂಗ್ಸ್ ನಲ್ಲಿ ವೇಗವಾಗಿ 27 ಟೆಸ್ಟ್ ಶತಕಗಳನ್ನು ಗಳಿಸಿದ್ದರು. ಸ್ಟೀವ್ ಸ್ಮಿತ್ 136 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಮಿತ್, ಸಚಿನ್ ತೆಂಡೂಲ್ಕರ್ ಹಾಗೂ ಕೊಹ್ಲಿ ಹಿಂದಿಕ್ಕಿದ್ದಾರೆ. ಸಚಿನ್ ಮತ್ತು ಕೊಹ್ಲಿ 141 ಇನ್ನಿಂಗ್ಸ್ ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.