ಎರಡು ತಿಂಗಳ ಹಿಂದೆ ಕೋವಿಡ್-19 ಲಾಕ್ಡೌನ್ನಿಂದ ತನಗೆ ಎದುರಾದ ದಯನೀಯ ಪರಿಸ್ಥಿತಿಯ ಕಾರಣದಿಂದ ದೇಶವಾಸಿಗಳು ಮುಮ್ಮಲ ಮರುಗುವಂತೆ ಮಾಡಿದ್ದ ದೆಹಲಿಯ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್ ತಮ್ಮ 80ನೇ ವಯಸ್ಸಿನಲ್ಲಿ ಹೊಸ ರೆಸ್ಟೋರೆಂಟ್ ಒಂದಕ್ಕೆ ಚಾಲನೆ ಕೊಟ್ಟಿದ್ದಾರೆ.
ಯೂಟ್ಯೂಬರ್ ಗೌರವ್ ವಾಸನ್ ಪೋಸ್ಟ್ ಮಾಡಿದ್ದ ವಿಡಿಯೋ ಒಂದರ ಮೂಲಕ ಕಾಂತಾ ಪ್ರಸಾದ್ ಹಾಗೂ ಅವರ ಮಡದಿ ದೇಶಾದ್ಯಂತ ನೆಟ್ಟಿಗರಿಗೆ ಪರಿಚಿತರಾಗಿದ್ದರು. ಇದೀಗ ಈ ದಂಪತಿ ದಕ್ಷಿಣ ದೆಹಲಿಯ ಮಾಳ್ವಿಯಾ ನಗರ ಪ್ರದೇಶದಲ್ಲಿ ಹೊಸ ರೆಸ್ಟೋರೆಂಟ್ ತೆರೆಯಲಿದ್ದಾರೆ.
“ದೇವರು ನಮಗೆ ಹರಸಿದ್ದಾನೆ, ನಮಗೆ ಈ ಬಗ್ಗೆ ಖುಷಿ ಇದೆ. ಜನರು ನನಗೆ ಸಹಾಯ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನನ್ನ ರೆಸ್ಟೋರೆಂಟ್ಗೆ ಬಂದು ಭೇಟಿ ಕೊಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಾವು ಭಾರತೀಯ ಹಾಗೂ ಚೈನೀಸ್ ಖಾದ್ಯಗಳನ್ನು ಸರ್ವ್ ಮಾಡುತ್ತೇವೆ” ಎಂದು ಕಾಂತಾ ಪ್ರಸಾದ್ ತಿಳಿಸಿದ್ದಾರೆ.
ಯೂಟ್ಯೂಬರ್ ಗೌರವ್ ವಾಸನ್ ತನ್ನ ಹೆಸರಿನಲ್ಲಿ ಬರುತ್ತಿರುವ ದೇಣಿಗೆ ದುಡ್ಡನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಕ್ಟೋಬರ್ 31ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಬಾಬಾ ಪ್ರಸಾದ್. ಈ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.