ವಿವಾಹಿತರು ಹೆಚ್ಚಿನ ಪ್ರಮಾಣದಲ್ಲಿ ಗರ್ಭ ನಿರೋಧಕಗಳನ್ನ ಬಳಕೆ ಮಾಡುತ್ತಿರೋದ್ರಿಂದ ದೇಶದ ಜನಸಂಖ್ಯೆ ಸ್ಥಿರವಾಗುತ್ತಿದೆ ಎಂದು ಹೊಸ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.
ಈ ವರದಿಯನ್ನ ಸೂಕ್ಷ್ಮವಾಗಿ ಗಮನಿಸಿದಾಗ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಬಳಕೆ ಮಾಡೋದನ್ನ ಕಡಿಮೆ ಮಾಡಿದ್ದಾರೆ ಹಾಗೂ ಕಾಂಡೋಮ್ಗಳ ಬಳಕೆ ಹೆಚ್ಚಾಗಿದೆ ಅನ್ನೋ ಅಂಶ ತಿಳಿದು ಬಂದಿದೆ.
ದೇಶದಲ್ಲಿ ಕಾಂಡೋಮ್ಗಳ ಮಾರಾಟ ಹೆಚ್ಚಾಗಿದ್ದು ಇದರನ್ವಯ ಕುಟುಂಬ ಯೋಜನೆಯಲ್ಲಿ ಪುರುಷರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಈ ಬದಲಾವಣೆ 22 ರಾಜ್ಯಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲಿಯೂ ಕಂಡು ಬಂದಿದೆ ಎಂದು ಭಾರತದ ಜನಸಂಖ್ಯಾ ಮಂಡಳಿಯ ಡಾ. ರಾಜೀವ್ ಆಚಾರ್ಯ ಹೇಳಿದ್ದಾರೆ.
ಅದರಲ್ಲೂ ಮುಂಬೈನಲ್ಲಿ ಪ್ರತಿ 10 ಪುರುಷರಲ್ಲಿ ಇಬ್ಬರು ಕಾಂಡೋಮ್ ಖರೀದಿ ಮಾಡುತ್ತಿದ್ದು ಈ ಮೂಲಕ ಕಾಂಡೋಮ್ ಖರೀದಿಯಲ್ಲಿ ಮುಂಬೈ ಅಗ್ರಗಣ್ಯ ಸ್ಥಾನವನ್ನ ಪಡೆದಿದೆ. ಕಳೆದ 5 ವರ್ಷಗಳಲ್ಲಿ ಕಾಂಡೋಮ್ಗಳ ಬಳಕೆ ಹೆಚ್ಚಾಗುತ್ತಿರೋದನ್ನ ನೋಡಿದ್ರೆ ಪುರುಷರು ಜನನ ನಿಯಂತ್ರಣಕ್ಕಾಗಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಭಾರತ ಕುಟುಂಬ ಯೋಜನಾ ಸಂಘಡ ಡಾ. ಮನಿಷಾ ಭೀಸೆ ಹೇಳಿದ್ದಾರೆ.