ಮುಂಬೈ: ದಿನದ 24 ಗಂಟೆಗಳ ಕಾಲ ಆರ್.ಟಿ.ಜಿ.ಎಸ್. ಕಾರ್ಯನಿರ್ವಹಿಸುವ ಕೆಲವೇ ಕೆಲವು ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಬಹುನಿರೀಕ್ಷಿತ 24 ಗಂಟೆಗಳ ಆರ್.ಟಿ.ಜಿ.ಎಸ್. ಸೇವೆ ಇಂದಿನಿಂದ ಆರಂಭವಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ಕುರಿತಾಗಿ ಮಾಹಿತಿ ನೀಡಿ, ದಿನದ 24 ಗಂಟೆಗಳ ಕಾಲ ಆರ್.ಟಿ.ಜಿ.ಎಸ್. ಸೇವೆ ಹೊಂದಿದ ಕೆಲವೇ ಕೆಲವು ದೇಶಗಳಲ್ಲಿ ಭಾರತ ಒಂದಾಗಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ ನಿಂದ ದಿನದ 24 ಗಂಟೆ ಆರ್.ಟಿ.ಜಿ.ಎಸ್. ಸೌಲಭ್ಯ ಕಲ್ಪಿಸುವುದಾಗಿ ಅಕ್ಟೋಬರ್ ನಲ್ಲಿ ಆರ್.ಬಿ.ಐ. ತಿಳಿಸಿತ್ತು. 2004 ರಲ್ಲಿ ಆರಂಭವಾದ ಆರ್.ಟಿ.ಜಿ.ಎಸ್. ವ್ಯವಸ್ಥೆಯಡಿ 4 ಬ್ಯಾಂಕುಗಳು ಮಾತ್ರ ಈ ಸೌಲಭ್ಯ ನೀಡುತ್ತಿದ್ದವು. ಪ್ರಸ್ತುತ 237 ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸೇವೆ ನೀಡುತ್ತಿದ್ದು, ಪ್ರತಿದಿನ 6.35 ಲಕ್ಷ ವಹಿವಾಟು ನಡೆಯುತ್ತಿದೆ. ಇದರ ಮೌಲ್ಯ 4.17 ಲಕ್ಷ ಕೋಟಿ ರೂಪಾಯಿಯಷ್ಟು ಇದೆ.