ಚೆನ್ನೈ: ಖ್ಯಾತ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ.
ದಶಕಗಳ ಕಾಲದಿಂದ ರಜನಿಕಾಂತ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಹೇಳಿ ಹೇಳಲಾಗುತ್ತಿತ್ತಾದರೂ ಅಂತಿಮವಾಗಿ ಅವರು ರಾಜಕೀಯದಿಂದ ದೂರವೇ ಉಳಿಯುತ್ತಿದ್ದರು. ಇವತ್ತು ನಡೆದ ಮಹತ್ವದ ಬೆಳವಣಿಗೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ 2021 ರ ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಬದಲಾವಣೆ ತರಲು ನಾನು ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದೇನೆ. ಈ ಪ್ರಯತ್ನದಲ್ಲಿ ನಾನು ಯಶಸ್ವಿಯಾದರೆ ಅದು ಜನರ ಯಶಸ್ಸು. ನಾನು ಸೋತರೆ ನನ್ನ ಪ್ರಯತ್ನದಲ್ಲಿ ಸೋಲಾಗುತ್ತದೆ. ಬದಲಾವಣೆ ಪ್ರಯತ್ನದಲ್ಲಿ ನನ್ನೊಂದಿಗೆ ನೀವೆಲ್ಲರೂ ನಿಲ್ಲಬೇಕೆಂದು ಮನವಿ ಮಾಡುತ್ತೇನೆ. ಎಲ್ಲವನ್ನು ಪರಿವರ್ತಿಸೋಣ. ಅದು ಈಗಲ್ಲದಿದ್ದರೆ ಇನ್ನೆಂದಿಗೂ ಆಗುವುದಿಲ್ಲವೆಂದು ರಜನಿಕಾಂತ್ ಹೇಳಿದ್ದಾರೆ.
ಈಗ ತಮಿಳುನಾಡಿನ ಹಣೆಬರಹವನ್ನು ಬದಲಾಯಿಸುವ ಸಮಯವಾಗಿದೆ ಎಂದ ಅವರು, ಜನವರಿಯಲ್ಲಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಜನರಿಗೆ ನನ್ನ ಜೀವನವನ್ನು ನೀಡಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ರಜನಿ ರಾಜಕೀಯ ಪ್ರವೇಶ ಘೋಷಿಸಿದ ನಂತರ ಅಭಿಮಾನಿಗಳು ತಮಿಳುನಾಡಿನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ.