ಬೆಂಗಳೂರು: ಸರ್ಕಾರಿ ನೌಕರರ ಅಮಾನತು ಸಂಬಂಧ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಅಮಾನತು ತೆರವಾದ ನಂತ್ರ ಹಿಂದಿನ ಹುದ್ದೆಗೆ ಮತ್ತೆ ನೇಮಿಸುವಂತಿಲ್ಲ ಎನ್ನಲಾಗಿದೆ.
ಅಮಾನತು ಬಗ್ಗೆ ತಿದ್ದುಪಡಿ ಆದೇಶ ಹೊರಡಿಸಿದ ಸರ್ಕಾರ, ಸಸ್ಪೆಂಡ್ ಆದ ಆರು ತಿಂಗಳ ಒಳಗೆ ಆಪಾದಿತ ಪಟ್ಟಿ ಸಲ್ಲಿಸಿ ಇಲಾಖೆ ವಿಚಾರಣೆ ಆರಂಭಿಸದಿದ್ದರೆ ಅಥವಾ ಕೋರ್ಟ್ನಲ್ಲಿ ಆರೋಪಪಟ್ಟಿ ಸಲ್ಲಿಸದಿದ್ದರೆ ಸಸ್ಪೆಂಡ್ ರದ್ದುಪಡಿಸುವ, ಮುಂದುವರೆಸುವ ಬಗ್ಗೆ ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು ಎಂದು ಹೇಳಲಾಗಿದೆ.
ಪ್ರಾಧಿಕಾರ ನಿರ್ಧರಿಸದೇ ಇದ್ದಲ್ಲಿ ಅಮಾನತುಗೊಂಡ ದಿನಾಂಕದಿಂದ ಆರು ತಿಂಗಳು ಪೂರ್ಣಗೊಂಡ ದಿನಾಂಕದಿಂದ ರದ್ದಾಗುತ್ತದೆ. ಅಮಾನತು ರದ್ದುಗೊಂಡ ಬಳಿಕ ನೇಮಕಾತಿ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಆದೇಶವನ್ನು ನೌಕರ ಕೊಡಲು ವಿಫಲವಾದಲ್ಲಿ ರದ್ದಾದ ದಿನಾಂಕದಿಂದ ಅನಧಿಕೃತವಾಗಿ ಗೈರುಹಾಜರಿ ಎಂದು ಪರಿಗಣಿಸಲಾಗುವುದು.
ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಲೋಕಾಯುಕ್ತ ಕಾಯ್ದೆಯಡಿ ಅಮಾನತಿನಲ್ಲಿ ಇಡಲಾದ ಪ್ರಕರಣಗಳಲ್ಲಿ ಸರ್ಕಾರಿ ನೌಕರರ ಅಮಾನತು ಅವಧಿ ವಿಸ್ತರಿಸಲು ತನಿಖಾ ಸಂಸ್ಥೆಯ ಸಕ್ಷಮ ಪ್ರಾಧಿಕಾರ ಕೋರಿದಲ್ಲಿ ಮಾತ್ರ ವಿಸ್ತರಣೆ ಮಾಡಲಾಗುವುದು. ಇಲ್ಲದಿದ್ದರೆ ನೌಕರನ ಅಮಾನತು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಅಮಾನತುಗೊಂಡ ಸರ್ಕಾರಿ ನೌಕರರನ್ನು ಅಮಾನತುನಿಂದ ತೆರವುಗೊಳಿಸಿದಾಗ ಹಿಂದಿನ ಹುದ್ದೆಗೆ ಮತ್ತೆ ನೇಮಿಸುವಂತಿಲ್ಲ ಎಂದು ಸರ್ಕಾರಿ ನೌಕರರ ಅಮಾನತು ಸಂಬಂಧ ತಿದ್ದುಪಡಿ ಆದೇಶವನ್ನು ಸರ್ಕಾರ ಪ್ರಕಟಿಸಿದೆ ಎನ್ನಲಾಗಿದೆ.