ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ಇದ್ದ ವೇಳೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಿದ್ದ 21 ವರ್ಷದ ಯುವತಿಯೊಬ್ಬರ ಮಾತಿಗೆ ವ್ಯತಿರಿಕ್ತವಾದ ಮಾಹಿತಿಯನ್ನು ಪೊಲೀಸ್ ತನಿಖೆ ಹೊರಹಾಕಿದೆ.
ಗುರುಗ್ರಾಮದ ಪ್ರತಿಷ್ಠಿತ ಆಸ್ಪತ್ರೆಯೊಂದರ ICUನಲ್ಲಿರುವ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಯುವತಿ, ಶನಿವಾರದಂದು ವೈದ್ಯರ ಸಲಹೆ ಮೇರೆಗೆ ವೆಂಟಿಲೇಟರ್ನಿಂದ ಹೊರಬಂದಿದ್ದರು.
ಪ್ರಕರಣದ ತನಿಖಾಧಿಕಾರಿ ACP ಉಷಾ ಕುಂಡು ಸಂತ್ರಸ್ತ ಯುವತಿಯ ಹೇಳಿಕೆಯನ್ನು ಖುದ್ದು ಆಕೆಯ ಪೋಷಕರು ಹಾಗೂ ವೈದ್ಯಾಧಿಕಾರಿಗಳ ಎದುರೇ ದಾಖಲಿಸಿಕೊಂಡಿದ್ದರು. ತನಿಖಾ ವರದಿ ಹಾಗೂ ಆಸ್ಪತ್ರೆಯ ಸಿಸಿಟಿವಿ ದಾಖಲೆಗಳ ಪ್ರಕಾರ ಅಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಗುರುಗ್ರಾಮ ಪೊಲೀಸ್ ಕಮಿಷನರ್ ಕೆಕೆ ರಾವ್ ತಿಳಿಸಿದ್ದಾರೆ.
“ತನಿಖೆ ವೇಳೆ ಯುವತಿಯ ಆಪಾದನೆಯನ್ನು ಪುಷ್ಠೀಕರಿಸುವ ಯಾವುದೇ ಸಾಕ್ಷ್ಯ ನಮಗೆ ಸಿಕ್ಕಿಲ್ಲ. ಇಡೀ ಘಟನೆಯನ್ನು ಆಳವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಈ ಸಂಬಂಧ ಆಸ್ಪತ್ರೆಯ 1800 ಉದ್ಯೋಗಿಗಳನ್ನು ಪ್ರಶ್ನಿಸಿದ್ದು, ಇವರ ಪೈಕಿ ಯುವತಿ ಆಪಾದನೆ ಮಾಡಿದ ವಿಕಾಸ್ ಹೆಸರಿನ 12 ಮಂದಿಯನ್ನು ಸಹ ದೀರ್ಘವಾಗಿ ಪ್ರಶ್ನಿಸಿದ್ದಾರೆ. ತನಿಖಾ ತಂಡ ಸಿಸಿಟಿವಿ ದೃಶ್ಯಾವಳಗಳನ್ನು ಸಹ ಶೋಧಿಸಿದೆ. ಆದರೆ ಆಕೆಯ ಹೇಳಿಕೆಗೆ ಪುಷ್ಠೀಕರಿಸುವ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ,” ಎಂದು ಆಯುಕ್ತರು ತಿಳಿಸಿದ್ದಾರೆ.
ಮಹಿಳೆಯ ತಂದೆ ಕೊಟ್ಟ ದೂರಿನ ಅನ್ವಯ ಇಲ್ಲಿನ ಸುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ತನಿಖೆ ಆರಂಭಿಸಲಾಗಿತ್ತು.