ಕಲಬುರಗಿ: ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಗ್ರಾಮಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ.
ಕಲಬುರಗಿ ಜಿಲ್ಲೆಯ ಹಳೆ ಹೆಬ್ಬಾಳ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಮನೆಯ ತಾರಸಿಯ ಮೇಲೆ ನಿಂತು ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಇನ್ನೊಂದೆಡೆ ಚಿಂಚೋಳಿ ಗ್ರಾಮದಲ್ಲಿ ಪ್ರವಾಹವುಂಟಾದ ಹಿನ್ನೆಲೆಯಲ್ಲಿ ತೋಟದ ಮನೆಯಲ್ಲಿದ್ದ ಹಲವರು ಮನೆಯ ಮೇಲ್ಛಾವಣಿಯಲ್ಲಿ ಆಶ್ರಯ ಪಡೆದಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಹಾಗರಗುಂಡಿ ಗ್ರಾಮದಲ್ಲಿ ಕೆರೆ ಒಡ್ಡು ಒಡೆದು ಜಮೀನುಗಳಿಗೆ ನೀರು ನುಗ್ಗಿದ್ದು, ಕೃಷಿ ಭೂಮಿ ಸಂಪೂರ್ಣ ನಾಶವಾಗಿವೆ.
ಇನ್ನು ನಾಗಾಯಿದಲಾಯಿ ಗ್ರಾಮದಲ್ಲಿ ನೀರಿನ ರಭಸಕ್ಕೆ ಕೆರೆಯ ತಡೆಗೋಡೆ ಕುಸಿದು ಗ್ರಮಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಜಲಾವೃತಗೊಂಡಿವೆ. ನಾಲ್ವರು ಯುವಕರು ಪ್ರಾಣದ ಹಂಗು ತೊರೆದು 50ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದಾರೆ.