ವಿವಾದಾತ್ಮಕ ವರ್ತನೆಯಿಂದ ಪಕ್ಷಕ್ಕೆ ಮುಜುಗರ ತರುವ ಗುಜರಾತ್ ನ ಬಿಜೆಪಿ ಶಾಸಕರೊಬ್ಬರು, ಕೊರೋನಾ ನಿಯಮ ಉಲ್ಲಂಘಿಸಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ವಾಘೋಡಿಯ ಕ್ಷೇತ್ರದ ಬಿಜೆಪಿ ಶಾಸಕ ಮಧು ಶ್ರೀವಾತ್ಸವ್, ಇತ್ತೀಚೆಗಷ್ಟೆ ಕೊರೋನಾದಿಂದ ಗುಣಮುಖರಾಗಿದ್ದರು.
ಈ ಹಿನ್ನೆಲೆಯಲ್ಲಿ ಗಜ್ರಾಡಿ ಹನುಮಾನ್ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದರಲ್ಲದೆ, ಹಾಡು, ಭಜನೆ, ಕುಣಿತದಲ್ಲಿ ಪಾಲ್ಗೊಂಡಿದ್ದರು. ಮಾಸ್ಕ್ ಧರಿಸಿರಲಿಲ್ಲ.
ಸಾಲದ್ದಕ್ಕೆ ಬೆಂಬಲಿಗರ ಶಿಳ್ಳೆ ಚಪ್ಪಾಳೆ ನಡುವೆ ಅಂತರವನ್ನೂ ಕಾಯ್ದುಕೊಳ್ಳದೆ ಕುಣಿದ ಕುಪ್ಪಳಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೋಂಕು ತಗುಲಿ ಆಸ್ಪತ್ರೆ ಸೇರಿದ್ದ ಶಾಸಕ ಶ್ರೀವಾತ್ಸವ್, ನಾನು ಬಾಹುಬಲಿ. ಕೊರೋನಾ ವೈರಾಣುವನ್ನು ನಾನು ಸೋಲಿಸುತ್ತೇನೆ. ಕೊರೋನಾ ಎಂಬ ವೈರಾಣುವೇ ಇಲ್ಲ. ಅದೇನು ಭಾರೀ ವೈರಾಣುವಲ್ಲ ಎಂದೆಲ್ಲ ಬಡಬಡಾಯಿಸಿದ್ದರು.