ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದ 42 ಕೋಟಿ ಜನರಿಗೆ 68, 820 ಕೋಟಿ ರೂಪಾಯಿ ವಿತರಿಸಲಾಗಿದೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಡವರು ಮತ್ತು ಸಂಕಷ್ಟದಲ್ಲಿರುವ ಜನರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 68,820 ಕೋಟಿ ರೂಪಾಯಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಮಂತ್ರಾಲಯ ತಿಳಿಸಿದೆ.
1.70 ಲಕ್ಷ ಕೋಟಿ ರೂಪಾಯಿಗಳ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯ, ರೈತರಿಗೆ ಧನ ಸಹಾಯ, ಹಿರಿಯ ನಾಗರಿಕರು, ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿದ್ದು ನಿರಂತರ ನಿಗಾ ವಹಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 8.94 ಕೋಟಿ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಮೊದಲ ಕಂತಿನ ಹಣವನ್ನು ವರ್ಗಾಯಿಸಲಾಗಿದೆ. ಇದಕ್ಕಾಗಿ 17,891 ಕೋಟಿ ರೂ. ಅನುದಾನ ನೀಡಲಾಗಿದೆ. 20.6 ಕೋಟಿ ಮಹಿಳೆಯರ ಜನ್ ಧನ್ ಖಾತೆಗಳಿಗೆ ಮೂರು ತಿಂಗಳ ಕಾಲ ತಲಾ 500 ರೂಪಾಯಿಯಂತೆ 30,925 ಕೋಟಿ ರೂಪಾಯಿ ನೀಡಲಾಗಿದೆ ಎನ್ನಲಾಗಿದೆ.