ಫ್ಲೋರಿಡಾ: ಮೃತ ಗಂಡನ ಬೂದಿ ತುಂಬಿದ ಬಾಟಲಿಯಲ್ಲಿ ಸಣ್ಣ ಸಂದೇಶ ಪತ್ರವನ್ನಿಟ್ಟು ಸಮುದ್ರಕ್ಕೆ ಎಸೆದಾಕೆಗೆ ಅಚ್ಚರಿ ಕಾದಿತ್ತು. ಬಾಟಲಿ ಎರಡು ವರ್ಷದ ನಂತರ ಸಾವಿರಾರು ಕಿಮೀಗಳ ಆಚೆ ಇದು ಸಿಕ್ಕಿದೆ.
ಕೆಂಟುಕಿ ರಾಜ್ಯದ ಸೊಮರ್ ಸೆಟ್ ನಿವಾಸಿ ಮೇರಿ ವಿಟ್ ಅವರ ಪತಿ ಜರ್ರಿ 2018 ರಲ್ಲಿ ಅಕಾಲಿಕವಾಗಿ ನಿಧನರಾಗಿದ್ದರು. ಎರಡು ತಿಂಗಳ ನಂತರ ಆ ಬೇಸರ ಕಳೆಯುವ ಸಲುವಾಗಿ ಮೇರಿ ತಮ್ಮ ಕುಟುಂಬದ ಜತೆ ಫ್ಲೋರಿಡಾದ ಡೆಟೋನಾ ಕಡಲ ತೀರಕ್ಕೆ ತೆರಳಿದ್ದರು. ಆಗ ತಮ್ಮ ಪತಿಯ ನೆನಪಿಗಾಗಿ ಅವರ ಮೃತ ಶರೀರ ಸುಟ್ಟ ಬೂದಿ ತುಂಬಿದ ಬಾಟಲಿಯಲ್ಲಿ ಸಂದೇಶವೊಂದನ್ನು ಬರೆದು ಅಟ್ಲಾಂಟಿಕಾ ಸಾಗರಕ್ಕೆ ಎಸೆದಿದ್ದರು.
ಘಟನೆ ನಡೆದು ಎರಡು ವರ್ಷಗಳ ನಂತರ ಇತ್ತೀಚೆಗೆ ಮೇರಿ ಅವರಿಗೆ ಬಂದ ಇ ಮೇಲ್ ಸಂದೇಶ ಅಚ್ಚರಿಗೆ ಕಾರಣವಾಗಿತ್ತು. ಅಮೆರಿಕಾದಿಂದ 7500 ಕಿಮೀ ದೂರದ ಸ್ಪೇನ್ ನ ವಾಯವ್ಯ ದಿಕ್ಕಿನ ರಾಜೊ ಕಡಲ ತೀರದಲ್ಲಿ ಆಕೆ ಎಸೆದ ಬಾಟಲಿ ಸಿಕ್ಕಿದೆ ಎಂಬ ಮಾಹಿತಿ ಮೇಲ್ ನಲ್ಲಿ ಇತ್ತು.
ಅಲ್ವಾರೇಜ್ ಎಂಬ ಕುಟುಂಬ ಬಾಟಲಿಯಲ್ಲಿನ ವಿವರ ನೋಡಿ ಮೇರಿ ಅವರಿಗೆ ಸಂದೇಶ ಕಳುಹಿಸಿತ್ತು. ಬೂದಿಯನ್ನು ಸಮುದ್ರಕ್ಕೆ ಎಸೆಯುವಂತೆ ಮೇರಿ, ಕುಟುಂಬಕ್ಕೆ ಮರು ಸಂದೇಶ ರವಾನಿಸಿದ್ದರು. ಬಾಟಲಿಯ ಬೂದಿಯನ್ನು ಸಮುದ್ರಕ್ಕೆ ಚೆಲ್ಲಿದ ವಿಡಿಯೋವನ್ನು ಅಲ್ವಾರೇಜ್ ಕುಟುಂಬ ಮೇರಿ ಅವರಿಗೆ ಕಳಿಸಿದೆ. ಎರಡೂ ಕುಟುಂಬಗಳ ನಡುವೆ ಅನಿರೀಕ್ಷಿತ ಬಾಂಧವ್ಯ ಈಗ ವೃದ್ಧಿಯಾಗಿದೆ.