ಕೊರೊನಾ ವೈರಸ್ ಲಾಕ್ಡೌನ್ನಿಂದ ಬಡವರು ಹಾಗೂ ದಿನಗೂಲಿ ನೌಕರರ ಬದುಕು ಬಹಳ ದುಸ್ತರವಾಗಿಬಿಟ್ಟಿದೆ. ಈ ಸಮಯದಲ್ಲಿ ಸಾಕಷ್ಟು ಮಂದಿ ಹಣ್ಣು, ತರಕಾರಿ ಮಾರಾಟಕ್ಕೆ ಇಳಿದಿದ್ದು ತಮ್ಮ ಕುಟುಂಬಗಳಿಗೆ ನೆರವಾಗಲು ಊರೂರುಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ.
ಇಂಥ ದಯನೀಯ ಪರಿಸ್ಥಿತಿಯ ನಡುವೆಯೂ ಸಹ ಕೆಲ ಸರ್ಕಾರಿ ನೌಕರರು ಅವರಿಂದಲೂ ಚಿಲ್ಲರೆ ಕಾಸಿಗೆ ಕೈಒಡ್ಡಿ, ಅಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಘಟನೆಗಳು ವರದಿಯಾಗಿವೆ.
ಇಂಥದ್ದೇ ಒಂದು ಘಟನೆಯಲ್ಲಿ, ಮಧ್ಯ ಪ್ರದೇಶದ ಇಂದೋರ್ನಲ್ಲಿ ಮೊಟ್ಟೆ ಮಾರಾಟ ಮಾಡುತ್ತಿದ್ದ 14 ವರ್ಷದ ಹುಡುಗನೊಬ್ಬ 100 ರೂ. ಲಂಚ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆತನ ಗಾಡಿಯನ್ನು ಉರುಳಿಸಿರುವ ಸಂಗತಿ ವರದಿಯಾಗಿದೆ. ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಗಾಡಿಯನ್ನು ತೆರವುಗೊಳಿಸು ಇಲ್ಲವಾದಲ್ಲಿ ದಿನಕ್ಕೆ 100 ರೂ. ಲಂಚ ಕೊಡು ಎಂದು ತನ್ನ ಬಳಿ ಅಧಿಕಾರಿಗಳು ಕೇಳಿದ್ದಾಗಿ ಆ ಹುಡುಗ ಹೇಳುತ್ತಿರುವುದು ವೈರಲ್ ಆಗಿದೆ.