ಮರವೊಂದರಿಂದ ಹೊರ ನುಸುಳಿದ ಸತ್ತ ಮನುಷ್ಯನ ಕಾಲಿನಂತೆಯೇ ಐದು ಬೆರಳು, ಉಗುರುಗಳು ಇರುವ ಬೂದು ನೀಲಿ ಬಣ್ಣದ ಕಾಲಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಈ ಫೋಟೋ ಪೋಸ್ಟ್ ಮಾಡಿದ್ದು, ಇದು ಯಾವ ಪ್ರಾಣಿಯ ಕಾಲು ಎಂದು ಗುರುತು ಹಿಡಿಯಿರಿ ಎಂದು ನೆಟ್ಟಿಗರಿಗೆ ಸವಾಲು ಹಾಕಿದ್ದಾರೆ.
ಈ ಫೋಟೋಕ್ಕೆ ಸಾವಿರಕ್ಕೂ ಅಧಿಕ ಮೆಚ್ಚುಗೆಗಳು ಬಂದಿವೆ. ನೆಟ್ಟಿಗರು ಊಹಿಸುವ ಈ ಆಟದಲ್ಲಿ ಕಮೆಂಟ್ ಮಾಡುವ ಮೂಲಕ ಪಾಲ್ಗೊಂಡಿದ್ದಾರೆ.
ಸುಶಾಂತ್ ನಂದಾ ಅವರು ಇನ್ನೊಂದು ಟ್ವೀಟ್ ಮಾಡಿ ಜನರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಅದು ಯಾವ ಜೀವಿ ಎಂಬುದನ್ನು ವಿವರಿಸಿದ್ದಾರೆ.
ಕ್ಸೈಲೇರಿಯಾ ಪ್ಲೈಮೋರ್ಫಾ ಎಂಬ ಫಂಗಸ್ ಇದಾಗಿದ್ದು, ಸತ್ತ ಮಾನವನ ಕಾಲಿನಂತೆ ಕಾಣುತ್ತದೆ ಎಂದು ವಿವರಿಸಿದ್ದಾರೆ. ಸುಶಾಂತ್ ನಂದಾ ಅವರು ‘ಫಸ್ಟ್ ನೇಚರ್ ಆಂಡ್ ಎಕಾರ್ಡಿಂಗ್ ಟು ವಿಚ್’ ಎಂಬ ಪ್ರಕಟಣೆಯನ್ನು ಆಧರಿಸಿ ಈ ವಿವರ ನೀಡಿದ್ದಾರೆ.
ಈ ಫಂಗಸ್‌ಗಳು ವರ್ಷವಿಡೀ ಶಿವಣೆ ಮರಗಳ ಮೇಲೆ ಬೆಳೆಯುತ್ತದೆ. ಆಯ್ದ ಕಾಲದಲ್ಲಿ ಮಾತ್ರ ಒಣ ಮರಗಳ ಸಂಧಿಯಲ್ಲಿ ಬೆಳೆಯುತ್ತವೆ ಎಂದು ಪ್ರಕಟಣೆ ಹೇಳುತ್ತದೆ.