
ಧಾರವಾಡ: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಇಂದು ಧಾರವಾಡ ನಗರದ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಹಾಗೂ ಅವರ ಪಾಲಕರೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ವಿಶೇಷ ಚೇತನ ಮಕ್ಕಳು ಅತ್ಯಂತ ದೃಡ ನಿಶ್ಚಯದ ಮಕ್ಕಳು. ತುಂಬಾ ಬುದ್ಧಿವಂತರು ಇರುತ್ತಾರೆ. ಅವರಿಗೆ ಸರಿಯಾದ ಆರೈಕೆ, ಚಿಕಿತ್ಸೆ, ಮೂಲಸೌಕರ್ಯಗಳು ಅಗತ್ಯವಿವೆ. ಸರ್ಕಾರವು ವಿಶೇಷ ಚೇತನ ಮಕ್ಕಳ ಆರೈಕೆಗೆ ಅಗತ್ಯ ನೆರವು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಸಚಿವರು ವಿಕಲಚೇತನ ಮಕ್ಕಳೊಂದಿಗೆ ಹಾಗೂ ಅವರ ಪಾಲಕದೊಂದಿಗೆ ಸಂವಾದ ನಡೆಸಿದರು. ವಿಶೇಷ ಚೇತನ ಶಾಲೆಯ ಶಿಕ್ಷಕರನ್ನು, ವೈದ್ಯರನ್ನು, ಮುಖ್ಯಸ್ಥರನ್ನು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ವಿಶೇಷ ಚೇತನ ಮಗುವಿನ ತಾಯಿ ಸಾವಿತ್ರಿ ಗೋಕಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೊಡ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಜನ ಮುಖಿ ಸೇವಾ ಸಂಸ್ಥೆ ಮುಖ್ಯಸ್ಥ ಬಸವರಾಜ ಮ್ಯಾಗೇರಿ, ವಿದ್ಯಾ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.