
ನವದೆಹಲಿ: ದೇಶದಲ್ಲಿ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯ ವಿಸ್ತರಣೆಯಿಂದ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ 18 ಲಕ್ಷ ಮಕ್ಕಳ ಕುಂಠಿತ ಬೆಳವಣಿಗೆ ತಡೆಯಲಾಗಿದೆ ಎಂದು ಅಮೆರಿಕಾದ ಎಕಾನಮಿಕ್ ಅಸೋಸಿಯೇಷನ್ ಅಧ್ಯಯನವೊಂದು ಮಾಹಿತಿ ನೀಡಿದೆ.
ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿ 1997 ರಲ್ಲಿ ಆರಂಭವಾದ ಪಡಿತರ ವಿತರಣಾ ಕಾರ್ಯಕ್ರಮವನ್ನು 2013ರಲ್ಲಿ ವಿಸ್ತರಿಸಲಾಯಿತು. 2020ರಲ್ಲಿ ಕೋವಿಡ್ -19 ಆರಂಭವಾದ ಬಳಿಕ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಭಾಗವಾಗಿ ಇದನ್ನು ಮತ್ತಷ್ಟು ಸುಧಾರಿಸಲಾಗಿದ್ದು, ಇದರಡಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕೆಜಿ ಅಕ್ಕಿ, ಎರಡು ಕೆಜಿ ಗೋಧಿ ಒದಗಿಸಲಾಗುತ್ತದೆ.
ಮಕ್ಕಳ ಕುಂಠಿತ ಬೆಳವಣಿಗೆ, ಪೋಷಣೆ ಮತ್ತು ಆಹಾರ ವೈವಿಧ್ಯತೆಯ ಮೇಲೆ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯ ಪ್ರಭಾವದ ಕುರಿತು ಮೌಲ್ಯಮಾಪನ ನಡೆಸಲು ಐಎಎಂ ಬೆಂಗಳೂರು, ಅಮೆರಿಕದ ಕ್ಯಾಲಿಫೋರ್ನಿಯಾ, ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂಶೋಧಕರು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿದ್ದ ಕುಟುಂಬಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದರು.
ಸರ್ಕಾರ ನೀಡಿದ ಪಡಿತರದಿಂದ ಆ ಕುಟುಂಬಗಳ 18 ಲಕ್ಷ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಹೊರ ಬಂದಿದ್ದು, ಜನರ ಆದಾಯ ಹೆಚ್ಚಳವಾಗಿದೆ. ಜನರಿಗೆ ವೈವಿಧ್ಯಮಯ ಆಹಾರ ಸೇವನೆ ಲಭ್ಯವಾಗಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.