
ಬೆಳಗಾವಿ: ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣದಿಂದ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ, ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಬುಧವಾರದಿಂದ ಭಾಗಶಃ ಪುನರಾರಂಭವಾಗಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಕೊಲ್ಲಾಪುರ, ಮಿರಜ್ ಗೆ ಬುಧವಾರ ಬೆಳಗ್ಗೆಯಿಂದಲೇ ಕೆಲವು ಬಸ್ ಗಳು ಕಾರ್ಯಾಚರಣೆ ನಡೆಸಿವೆ. ಚಿಕ್ಕೋಡಿ ವಿಭಾಗದಿಂದ ಮಹಾರಾಷ್ಟ್ರದ ಇಚಲಕರಂಜಿ ಸೇರಿ ಇತರ ಕಡೆಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ಗಳು ಕೂಡ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಪುನಾರಂಭಿಸಿದ್ದು, ಗಡಿಭಾಗದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ವೇಳಾಪಟ್ಟಿಯ ಪ್ರಕಾರ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಆರಂಭಿಸಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.