alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾದ ‘ಮಾನ್ಸೂನ್ ಫೆಸ್ಟಿವಲ್’

goa fest

ಸಾಮಾನ್ಯವಾಗಿ ನಾವು ಮಳೆಗಾಲದ ಅವಧಿ ಅಂದರೆ ಜೂನ್, ಜುಲೈ, ಅಗಸ್ಟ್ ಈ ಮೂರು ತಿಂಗಳನ್ನು ‘ಆಫ್ ಸೀಸನ್’ ಎಂದು ಕರೆಯುತ್ತೇವೆ. ಏಕೆಂದರೆ ಈ ದಿನಗಳಲ್ಲಿ ಅಂತ ವಿಶೇಷವಾದ ಹಬ್ಬ ಹರಿದಿನಗಳು ಇರುವುದಿಲ್ಲ. ನಮಗೆ ಹಬ್ಬವೆಂದಾಕ್ಷಣ ಮೊದಲ ನೆನಪಾಗುವುದು ಶ್ರಾವಣ ಮಾಸ ಅದೇ ಗೋವಾದ ಜನರಿಗೆ ಹಬ್ಬವೆಂದರೆ ಮೊದಲು ನೆನಪಾಗುವುದು ಮುಂಗಾರು.

ಹೌದು ಗೋವಾದ ಜನರು ಮಳೆರಾಯನ ಅಬ್ಬರದಲ್ಲೂ ಅನೇಕ ಹಬ್ಬಗಳನ್ನು ಆಚರಿಸಿ ಸಂಭ್ರಮಿಸುತ್ತಾರೆ. ಹೀಗೆ ಅವರು ಆಚರಿಸುವ ಪ್ರತಿಯೊಂದು ಮಳೆ ಹಬ್ಬದ ಹಿಂದೆಯೂ ಒಂದು ಕಥೆ ಇದೆ. ಅಂತಹ ಕೆಲವು ‘ಮಾನ್ಸೂನ್ ಫೆಸ್ಟಿವಲ್’ ನ ವಿವರಗಳು ಇಲ್ಲಿವೆ ನೋಡಿ.

ಸೌವೋ ಜೋವಾ ಹಬ್ಬ

ಸೌವೋ ಜೋವಾ ಹಬ್ಬವನ್ನು ಗೋವಾದ ಸೈಲಿಮ್ ನಲ್ಲಿ ಜೂನ್ 24 ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಬ್ಯಾಪ್ಟಿಸ್ಟ್ ಪಂಥದ ಸೇಂಟ್ ಜಾನ್ಸ್ ನೆನಪಿಗಾಗಿ ಮಾಡುತ್ತಾರೆ. ಈ ಸಂಪ್ರದಾಯ ಸುಮಾರು 150 ವರ್ಷಗಳಿಂದ ನಡೆಯುತ್ತಿದೆ. ಈ ಹಬ್ಬದಲ್ಲಿ ಚಪೋರಾ, ಅಂಜುನಾ, ಅಸ್ಸಾಗೌ ಮತ್ತು ಸೈಲಿಮ್ ಹಳ್ಳಿಯ ಜನರು ದೋಣಿಯಲ್ಲಿ ಪೆರೇರಾ ವಡ್ಡೋದಲ್ಲಿರುವ ಸೌವೋ ಜೋವಾ ಮಂದಿರಕ್ಕೆ ಬಂದು ಗೌರವಾರ್ಪಣೆ ಸಲ್ಲಿಸಿ ಸಾಂಪ್ರದಾಯಿಕ ಡಾಲಿಯಲ್ಲಿ ಭಾಗವಹಿಸುತ್ತಾರೆ. ವಿಶೇಷವೆಂದರೆ ಈ ಹಬ್ಬದಲ್ಲಿ ಎಲ್ಲ ಊರಿನ ಜನರು ಬಾವಿ, ಕೊಳಗಳಲ್ಲಿ ಈಜಾಡಿ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುತ್ತಾರೆ.

ಪೊನ್ಸೆಚೆಮ್ ಹಬ್ಬ

ಇದೊಂದು ಹಲಸಿನ ಹಬ್ಬ. ಈ ಹಬ್ಬವನ್ನು ಜೂನ್ 24 ರಂದು ಸೊಕೊರಾ ಹಳ್ಳಿಯಲ್ಲಿ ಆಚರಿಸುತ್ತಾರೆ. ಆ ದಿನ ಅಲ್ಲಿ ಎಲ್ಲರೂ ಹಲಸಿನ ಹಣ್ಣನ್ನು ಸವಿಯುತ್ತಾರೆ.

ಸನ್ ಗಾಡ್ ಹಬ್ಬ

ಸೇಂಟ್ ಪೀಟರ್ ನ ಈ ಹಬ್ಬವನ್ನು ಸನ್ ಗಾಡ್ ಹಬ್ಬವೆಂದು ಹೇಳಲಾಗುತ್ತದೆ. ಈ ಹಬ್ಬವನ್ನು ಎಲ್ಲ ಮೀನುಗಾರರ ಸಮುದಾಯದವರು  ಆಚರಿಸುತ್ತಾರೆ. ಜೂನ್ 29 ರಂದು ನಡೆಯುವ ಈ ಹಬ್ಬದಲ್ಲಿ ಎಲ್ಲ ಬೋಟ್ ಗಳನ್ನು ಒಂದಕ್ಕೊಂದು ಕಟ್ಟಿ ಅದನ್ನು ತೆಪ್ಪದ ರೀತಿಯಲ್ಲಿ ಜೋಡಿಸಲಾಗುತ್ತದೆ. ಅದರ ಮೇಲೆ ತಾತ್ಕಾಲಿಕ ಚರ್ಚ್ ಗಳನ್ನು ಅಥವಾ ಮಂದಿರಗಳನ್ನು ನಿರ್ಮಿಸುತ್ತಾರೆ.

ಚಿಕಲ್ಕಾಲೊ

ಚಿಕಲ್ಕಾಲೊ ಒಂದು ಸಾಂಪ್ರದಾಯಿಕ ಹಬ್ಬ. ಇದನ್ನು ಜುಲೈ ಕೊನೆಯಲ್ಲಿ ಮರ್ಸೆಲ್ ನಲ್ಲಿ ಆಚರಿಸುತ್ತಾರೆ. ಆಷಾಢ ಏಕಾದಶಿಯ ನಂತರ ಜನರು ಕೆಸರಿನಲ್ಲಿಳಿದು ಒಬ್ಬರಿಗೊಬ್ಬರು ಕೆಸರನ್ನು ಎರಚಿಕೊಳ್ಳುತ್ತಾರೆ.

ಟೊಕ್ಸೆಕೆಮ್ ಹಬ್ಬ

ಸೇಂಟ್ ಅನ್ನೆಗೆ ಸಮರ್ಪಿಸಲಾಗಿರುವ ಭವ್ಯವಾದ ಚರ್ಚ್ ಸಂತಾನಾ ಚರ್ಚ್. ಇದು ತಲೌಲಿಮ್, ತಿಸ್ವಾದಿಯಲ್ಲಿದೆ. ಸೇಂಟ್ ಅನ್ನೆಗೆ ಮದುವೆಯಾಗಿ 40 ವರ್ಷಗಳಾದ ಮೇಲೆ ಮಗುವಾಗಿತ್ತು. ಹಾಗಾಗಿ ಇಲ್ಲಿ ಮಕ್ಕಳಾಗದವರು ಸೇಂಟ್ ಅನ್ನೆಯ ಆಶೀರ್ವಾದ ಪಡೆಯಲು ಬರುತ್ತಾರೆ. ಹೀಗೆ ಚರ್ಚ್ ಗೆ ಬರುವಾಗ ಸೌತೆಕಾಯಿಗಳನ್ನು ಖರೀದಿಸಿ, ನಂತರ ಮನೆಗೊಯ್ದು ಅದನ್ನು ಪ್ರಸಾದ ರೂಪದಲ್ಲಿ ತಿನ್ನುವುದು ವಾಡಿಕೆ. ಈ ಟೊಕ್ಸೆಕೆಮ್ ಹಬ್ಬ ತಲೌಲಿಮ್ ನಲ್ಲಿ ಜುಲೈ 29 ರಂದು ನಡೆಯುತ್ತದೆ.

ಪ್ಯಾತೊಲಿನ್ ಚೆಮ್ ಹಬ್ಬ

ಆಗಸ್ಟ್ 15 ರಂದು ನಡೆಯುವ ಈ ಹಬ್ಬವನ್ನು ಮಹಿಳೆಯರ ಹಬ್ಬವೆಂದೇ ಹೇಳಲಾಗುತ್ತದೆ. ಈ ದಿನ ಸೊಕೊರೊ ಹಳ್ಳಿಯ ಮಹಿಳೆಯರು ಪಾಥೋಲಿಯೊ (ಅರಿಸಿನದ ಎಲೆಯಲ್ಲಿ ಬೆಲ್ಲ ಮತ್ತು ಅಕ್ಕಿಯಿಂದ ಮಾಡಿದ ಸಿಹಿ) ಅನ್ನು ತಯಾರಿಸುತ್ತಾರೆ. ನಂತರ ಧರ್ಮ ಗುರುವಿನ ಆಶೀರ್ವಾದ ಪಡೆಯುತ್ತಾರೆ.

ಬಾಂಡರಮ್

ಬಾಂಡರಮ್ ಎಂಬ ಪದ ಧ್ವಜದ ಅರ್ಥವನ್ನು ಸೂಚಿಸುತ್ತದೆ. ಹಿಂದೆ ದಿವಾರ್ ನಲ್ಲಿ ನಡೆದ ಕೆಲವು ಯುದ್ಧದಿಂದ ಪೋರ್ಚುಗೀಸರು ತಮ್ಮ ಗಡಿಯನ್ನು ವಿಭಾಗಿಸುವ ಸಲುವಾಗಿ ಧ್ವಜಗಳನ್ನು ಬಳಸುತ್ತಿದ್ದರು. ಆ ತರುವಾಯ ಪ್ರತಿಸ್ಪರ್ಧಿಗಳು ಕಲ್ಲುಗಳನ್ನಿಟ್ಟು ಗಡಿಯನ್ನು ಗುರುತಿಸಿಕೊಂಡರು.

ಅಂತಹ ಯುದ್ಧದ ನೆನಪನ್ನು ಇಂದಿನ ಜನಾಂಗ ಅಣುಕು ಪ್ರದರ್ಶನದ ಮೂಲಕ ತೋರಿಸುತ್ತದೆ. ಅಣುಕು ಪ್ರದರ್ಶನದಲ್ಲಿ ಬಿದಿರಿನ ತುಂಡುಗಳನ್ನು ಮತ್ತು ಹಣ್ಣುಗಳನ್ನು ಹೋರಾಟದ ಕ್ಷಿಪಣಿಗಳನ್ನಾಗಿ ಬಳಸುತ್ತಾರೆ. ಈ ಆನಂದದ ಉತ್ಸವದಲ್ಲಿ ಎಲ್ಲ ಹಳ್ಳಿಯ ಜನರೂ ಭಾಗವಹಿಸುತ್ತಾರೆ. ಬಾಂಡರಮ್ ಹಬ್ಬವನ್ನು ಆಗಸ್ಟ್ ತಿಂಗಳ ನಾಲ್ಕನೇ ಶನಿವಾರದಂದು ದಿವಾರ್ ನಲ್ಲಿ ಆಚರಿಸಲಾಗುತ್ತದೆ.

ಗೋವಾದ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರು ಅವರ ಈ ‘ಮಾನ್ಸೂನ್ ಫೆಸ್ಟ್’ ನಲ್ಲೂ ಭಾಗವಹಿಸಿದರೆ ಪ್ರವಾಸಿಗರು ಗೋವಾವನ್ನು ಇನ್ನಷ್ಟು ಪ್ರೀತಿಸುವುದರಲ್ಲಿ ಎರಡು ಮಾತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...