alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರು, ಭಕ್ತರನ್ನು ಸೆಳೆಯುವ ಗೋಕರ್ಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿದ್ದು, ಅವುಗಳಲ್ಲಿ ಗೋಕರ್ಣ ಕೂಡ ಒಂದಾಗಿದೆ. ನೂರಾರು ವರ್ಷಗಳಿಂದ ಭಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಗೋಕರ್ಣ ದಕ್ಷಿಣದ ಕಾಶಿ ಎಂದೂ ಕರೆಯಲ್ಪಡುತ್ತದೆ.

ಗೋಕರ್ಣ ಎಂದರೆ ಗೋವಿನ ಕಿವಿ ಎಂದು ಅರ್ಥ. ಶಿವನು ಗೋವಿನ ಕಿವಿಯಿಂದ ಉದ್ಭವಿಸಿದ ಸ್ಥಳವಿದು ಎಂದು ಹೇಳಲಾಗುತ್ತದೆ. ಗಂಗಾವಳಿ ಮತ್ತು ಅಘನಾಶಿನಿ ನದಿಗಳ ನಡುವೆ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತೆ ಈ ಪ್ರದೇಶವಿದೆ.

ವರ್ಷವಿಡಿ ಗೋಕರ್ಣಕ್ಕೆ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ರಜಾದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಜಾಸ್ತಿ ಇರುತ್ತದೆ. ತಾಳೆ, ತೆಂಗು, ಅಂಗಡಿಗಳು, ರಥಬೀದಿಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮಹಾಬಲೇಶ್ವರ ದೇವಾಲಯದಲ್ಲಿ ಪುರಾಣ ಪ್ರಸಿದ್ಧವಾದ ಆತ್ಮಲಿಂಗವಿದೆ. ಭಕ್ತರು ದೇವಾಲಯಕ್ಕೆ ಆಗಮಿಸುವ ಮೊದಲು ಸಮುದ್ರದಲ್ಲಿ ಸ್ನಾನ ಮಾಡಿ ಮರಳಿನಲ್ಲಿ ಲಿಂಗವನ್ನು ಮಾಡುವ ಸಂಪ್ರದಾಯವಿದೆ.

ಪುರಾಣಗಳ ಪ್ರಕಾರ, ರಾವಣ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡಿದ ಬಳಿಕ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡು ಲಂಕೆಗೆ ಹೊರಡುತ್ತಾನೆ. ಆತ್ಮಲಿಂಗವನ್ನು ಮಾರ್ಗಮಧ್ಯೆ ಎಲ್ಲಿಯೂ ನೆಲದ ಮೇಲೆ ಇಡದಂತೆ ಶಿವ ಎಚ್ಚರಿಕೆ ನೀಡಿರುತ್ತಾನೆ. ರಾವಣ ಲಂಕೆಗೆ ತೆರಳುವ ಮಾರ್ಗಮಧ್ಯದಲ್ಲಿ ಸಂಧ್ಯಾವಂದನೆಗಾಗಿ ಬ್ರಾಹ್ಮಣ ಬಾಲಕನ ವೇಷದಲ್ಲಿದ್ದ ಗಣಪತಿಗೆ ಲಿಂಗವನ್ನು ಕೊಟ್ಟು ಸಮುದ್ರಕ್ಕೆ ಇಳಿಯುತ್ತಾನೆ. ಆತ ಸಂಧ್ಯಾವಂದನೆ ಮುಗಿಸಿ ಬರುವಷ್ಟರಲ್ಲಿ ಗಣಪತಿ ಲಿಂಗವನ್ನು ನೆಲದ ಮೇಲೆ ಇಡುತ್ತಾನೆ. ಅದು ಅಲ್ಲೇ ಪ್ರತಿಷ್ಠಾಪನೆಗೊಳ್ಳುತ್ತದೆ. ಸಂಧ್ಯಾವಂದನೆ ಮುಗಿಸಿ ಬಂದ ರಾವಣ ಆತ್ಮಲಿಂಗವನ್ನು ಕೀಳಲು ಪ್ರಯತ್ನಿಸಿದರೂ ಅದು ಅಲ್ಲಾಡುವುದಿಲ್ಲ.

ಇನ್ನು ಗೋಕರ್ಣದಲ್ಲಿ ಮಹಾಗಣಪತಿ ದೇವಾಲಯ, ಉಮಾಮಹೇಶ್ವರಿ ದೇವಾಲಯ, ಭದ್ರಕಾಳಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಇಲ್ಲಿವೆ. ಕೋಟಿ ತೀರ್ಥ ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸ್ಥಳಗಳಾದ ಕುಮಟದಿಂದ ಸುಮಾರು 36 ಕಿಲೋ ಮೀಟರ್, ಆಂಕೋಲಾದಿಂದ 25 ಕಿಲೋ ಮೀಟರ್ ದೂರದಲ್ಲಿ ಗೋಕರ್ಣ ಇದ್ದು ಬಸ್ ಇತರೆ ವಾಹನಗಳ ಸೌಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...