alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ ಭೀಷ್ಮ ಕೆರೆ

ಇಲ್ಲಿನ ಜನರಿಗೆ ಈ ಕೆರೆಯೇ ಜೀವನಾಡಿ. ಇಷ್ಟು ದಿನ ಮಳೆ ಇಲ್ಲದೇ ಕೆರೆ ಬಣಗುಡುತ್ತಿತ್ತು. ಆದರೆ, ಈ ಬಾರಿ ಕೆರೆಯ ಒಡಲು ಭರ್ತಿಯಾಗಿದ್ದು, ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ.

ಕೆರೆಯಲ್ಲಿ ಕಣ್ಣು ಹಾಯಿಸಿದಷ್ಟು ಬರೀ ನೀರೇ ಕಾಣುತ್ತದೆ. ಪಾಲಕರೊಂದಿಗೆ ಮಕ್ಕಳು ದೋಣಿ ವಿಹಾರ ನಡೆಸುವುದನ್ನು ನೋಡುವುದೇ ಚೆಂದ. ಕುದುರೆ ಸವಾರಿ ಮಾಡುವ ಚಿಣ್ಣರನ್ನು ಕಂಡರೆ ಮನಸಿಗೆ ಖುಷಿಯಾಗುತ್ತದೆ. ಇಂತಹ ಕಲರ್ ಫುಲ್ ದೃಶ್ಯಗಳು ಕಂಡು ಬರುವುದು ಗದಗ ಬೆಟಗೇರಿ ಅವಳಿ ನಗರದ ಜೀವನಾಡಿ ಭೀಷ್ಮಕೆರೆಯಲ್ಲಿ.

ಅನೇಕ ವರ್ಷಗಳಿಂದ ಬತ್ತಿ ಹೋಗಿದ್ದ ಈ ಕೆರೆ ನೀರು ತುಂಬಿಕೊಂಡು ನಳನಳಿಸುತ್ತಿದೆ. ಸಚಿವ ಹೆಚ್.ಕೆ. ಪಾಟೀಲ್ ಅವರ ಪ್ರಯತ್ನದಿಂದ ಸುಮಾರು 130 ಹೆಕ್ಟೇರ್ ವಿಸ್ತೀರ್ಣದ ಕೆರೆಗೆ ತುಂಗಾ ಭದ್ರಾ ನದಿಯಿಂದ ನೀರು ಹರಿಸುವ ಯೋಜನೆ ರೂಪಿಸಿದ್ದು, ನೀರು ಬಂದ ಬಳಿಕ ಕೆರೆಯ ಚಿತ್ರಣವೇ ಬದಲಾಗಿದೆ.

ಸುಮಾರು 108 ಅಡಿ ಎತ್ತರದ ಬಸವೇಶ್ವರ ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದರೊಂದಿಗೆ 12 ಬೋಟ್ ಗಳ ವ್ಯವಸ್ಥೆ ಮಾಡಲಾಗಿದ್ದು, ಸಂಜೆಯಾಗುತ್ತಲೇ ಸ್ಥಳೀಯರು, ಪ್ರವಾಸಿಗರ ದಂಡೇ ನೆರೆದಿರುತ್ತದೆ. ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತರಾಗಿ ಭೇಟಿ ನೀಡಲು ಪ್ರಶಸ್ತವಾದ ಸ್ಥಳ ಇದಾಗಿದೆ. ಗದಗ ಮತ್ತು ಸುತ್ತಮುತ್ತಲಿನ ಜನರಿಗೆ ಸುಂದರ ಪ್ರವಾಸಿ ತಾಣವಾಗಿದೆ. ಈ ಮೊದಲು ಬತ್ತಿದ್ದ ಕೆರೆ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಈಗ ನೀರಿನಿಂದ ನಳ ನಳಿಸುತ್ತಿರುವ ಕೆರೆ ಸುತ್ತಲಿನ ಜನರ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. ಇನ್ನು ಕೆರೆಗೆ ಹೊಂದಿಕೊಂಡ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಯೋಜನೆ ಜಾರಿಯಾದಲ್ಲಿ ಗದಗದ ಭೀಷ್ಮ ಕೆರೆ ಇನ್ನಷ್ಟು ಆಕರ್ಷಣೀಯವಾಗಲಿದೆ.

ಕುದುರೆ ಸವಾರಿ, ದೋಣಿ ವಿಹಾರ, ಪ್ರಶಾಂತ ವಾತಾವರಣ ಬೇಕಾದಲ್ಲಿ ಒಮ್ಮೆ ಭೀಷ್ಮ ಕೆರೆಯನ್ನು ನೋಡಿ ಬನ್ನಿ. ವಾರಾಂತ್ಯದ ಬಿಡುವಿನಲ್ಲಿ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...